ನವದೆಹಲಿ: ದೆಹಲಿ ಕೆಂಪು ಕೋಟೆಯ ಬಳಿ ಸಂಭವಿಸಿದ್ದ ಕಾರು ಸ್ಫೋಟ ಬೆನ್ನಲ್ಲೇ ಒಂದೊಂದೇ ಅಂಶಗಳು ಬಹಿರಂಗವಾಗುತ್ತಿದೆ. ಕಾಶ್ಮೀರದ ಅನಂತ್ನಾಗ್ ಆಸ್ಪತ್ರೆಯಲ್ಲಿ ಉಗ್ರ ಡಾ.ಉಮರ್ ನಿರ್ಲಕ್ಷ್ಯದಿಂದ ಒಂದು ಜೀವ ಬಲಿಯಾಗಿದ್ದಕ್ಕೆ ಕೆಲಸ ಕಳೆದುಕೊಂಡು ಅಲ್-ಪಲಾಹ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡು, ಅಲ್ಲಿಂದ ಭಯೋತ್ಮಾದಕ ದಾಳಿಗೆ ಸಂಚು ಹೂಡಿದ್ದ ಎಂದು ತಿಳಿದುಬಂದಿದೆ.
ಐತಿಹಾಸಿಕ ಕೆಂಪು ಕೋಟೆಯ ಬಳಿ ಸಂಭವಿಸಿದ್ದ ಸ್ಫೋಟದಿಂದ 12 ಜನರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟಗೊಂಡ ಕಾರು ಘಟನೆಗೂ ಮುನ್ನ ದೆಹಲಿಯ ಹಲವೆಡೆ ಸುತ್ತಾಡಿರುವುದು ಕಂಡುಬಂದಿದ್ದು, ಚಾಲಕರು ಯಾರು ಎಂದು ಪತ್ತೆಹಚ್ಚಿದ್ದಾಗ ಡಾ.ಉಮರ್ ಉನ್ ನಬಿ ಎಂದು ತಿಳಿದುಬಂದಿದೆ. ಸ್ಫೋಟದಲ್ಲಿ ಉಮರ್ ದೇಹ ಸಂಪೂರ್ಣವಾಗಿ ಛಿದ್ರಗೊಂಡಿದ್ದು, ತನಿಖಾ ಸಂಸ್ಥೆ ಈಗಾಗಲೇ ಉಮರ್ ಕುಟುಂಬಸ್ಥರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದೆ.
ಜೀವ ಉಳಿಸಿಬೇಕಿದ್ದ ಉಮರ್ 12 ಜೀವಗಳನ್ನು ಬಲಿಪಡೆದ:
ದೆಹಲಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ಉಮರ್ ನಬಿ ಶ್ರೀನಗರದಿಂದ MBBS ಮತ್ತು MD ಪದವಿಗಳನ್ನು ಪಡೆದು 2023ರಲ್ಲಿ ಕಾಶ್ಮೀರದ ಅನಂತ್ನಾಗ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಸ್ಆರ್ ಆಗಿ ಕೆಲಸ ಮಾಡುತ್ತಿದ್ದ.
ಆರಂಭದಿಂದಲೂ ಉಮರ್ ಕೆಲಸ ವಿಷಯದಲ್ಲಿ ಕೆಟ್ಟ ಉದ್ಯೋಗಿಯಾಗಿಯೇ ಕಾಣಿಸಿಕೊಂಡಿದ್ದ. ದಿನೇದಿನೇ ಒಂದಿಲ್ಲೊಂದು ದೂರುಗಳು ಬರುತ್ತಲೇ ಇದ್ದವು. ಸಹ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇರಿದಂತೆ ರೋಗಿಗಳು ಕೂಡ ಉಮರ್ನ ಅಸಭ್ಯ ಹಾಗೂ ಅಜಾಗರೂಕತೆ ಬಗ್ಗೆ ಆರೋಪಿಸುತ್ತಿದ್ದರು. ಅಲ್ಲದೇ ಉಮರ್ ಕೂಡ ಹೆಚ್ಚಿನ ಸಮಯ ಆಸ್ಪತ್ರೆಗೆ ಗೈರಾಗಿಯೇ ಇರುತ್ತಿದ್ದ.
ಆ ಸಮಯದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೋರ್ವರನ್ನು ಉಮರ್ ನೋಡಿಕೊಳ್ಳುತ್ತಿದ್ದ. ಆ ದಿನ ಅವರಿಗೆ ಚಿಕಿತ್ಸೆ ನೀಡಲು ಉಮರ್ ಆಸ್ಪತ್ರೆಗೆ ಬರಲೇ ಇಲ್ಲ. ಈ ವೇಳೆ ಅನಿವಾರ್ಯ ಕಾರಣದಿಂದ ಅಲ್ಲಿನ ಕಿರಿಯ ವೈದ್ಯರು ಅವರನ್ನು ಉಳಿಸುವ ಪ್ರಯತ್ನ ಮಾಡಿದರು. ಆದರೆ ಅದು ವಿಫಲವಾಗಿ ರೋಗಿ ಸಾವನ್ನಪ್ಪಿದರು. ಮೃತ ರೋಗಿಯ ಕುಟುಂಬಸ್ಥರು ಮೇಲಾಧಿಕರಿಗಳಿಗೆ ಉಮರ್ ವಿರುದ್ಧ ದೂರು ನೀಡಿದರು. ಈ ವಿಷಯದ ಬಗ್ಗೆ ತನಿಖೆ ನಡೆಸಲು ನಾಲ್ವರು ಹಿರಿಯ ವೈದ್ಯರ ಸಮಿತಿಯನ್ನು ರಚಿಸಲಾಯಿತು. ಆದರೆ ಉಮರ್ ನಾನು ಆಸ್ಪತ್ರೆಗೆ ಬಂದಿದ್ದೆ ಎಂದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಉಮರ್ ಸುಳ್ಳು ಹೇಳುತ್ತಿರುವುದು ಗೊತ್ತಾಗಿತ್ತು. ತನಿಖೆ ಸಮಯದಲ್ಲಿ ಹಲವು ಬಾರಿ ಸಮನ್ಸ್ ಜಾರಿಯಾಗಿದ್ದರೂ ಕೂಡ ಉಮರ್ ಸಮಿತಿ ಮುಂದೆ ಹಾಜರಾಗಿರಲಿಲ್ಲ. ಇದರಿಂದ ಸಮಿತಿ ಅಂತಿಮವಾಗಿ ಉಮರ್ನ್ನು ಕೆಲಸದಿಂದ ವಜಾಗೊಳಿಸಿತ್ತು.
ವಜಾಗೊಂಡ ನಂತರ ಡಾ.ಉಮರ್ 2023ರಲ್ಲಿ ಫರಿದಾಬಾದ್ನ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸ್ಗೆ ಸೇರಿಕೊಂಡ. ಅಲ್ಲಿ ವೈದ್ಯರು, ನರ್ಸ್ಗಳೊಟ್ಟಿಗೆ ಸೇರಿಕೊಂಡು ಭಯೋತ್ಪಾದಕ ದಾಳಿಗೆ ಸಂಚು ಹೂಡಿದ್ದ ಎಂದು ಮೂಲಗಳು ತಿಳಿಸಿವೆ.
ದೆಹಲಿ ಬಾಂಬ್ ಸ್ಫೋಟವಾದ ಬಳಿಕ ಉಮರ್ ಅತ್ತಿಗೆ ಮಾಧ್ಯಮದೊಂದಿಗೆ ಮಾತನಾಡಿ, ಉಮರ್ ಯಾವಾಗಲೂ ಅಂತರ್ಮುಖಿಯಾಗಿದ್ದ. ಹೆಚ್ಚಾಗಿ ತನ್ನ ಕೋಣೆಯಲ್ಲಿ ಒಬ್ಬನೇ ಇರುತ್ತಿದ್ದ. ಒಬ್ಬನೇ ಅಧ್ಯಯನದಲ್ಲಿಯೇ ತೊಡಗಿಕೊಂಡಿರುತ್ತಿದ್ದ ಎಂದು ಹೇಳಿದ್ದರು. ಆದರೆ ಇದೀಗ ಇದಕ್ಕೆ ವಿರುದ್ಧ ಅನಂತ್ನಾಗ್ ಆಸ್ಪತ್ರೆಯ ಪ್ರೊಫೆಸರ್ ಡಾ. ಗುಲಾಮ್ ಜೀಲಾನಿ ರೊಮ್ಶೂ ಪ್ರತಿಕ್ರಿಯಿಸಿದ್ದಾರೆ.
