ಬೆಂಗಳೂರು: ಬಿಜೆಪಿ ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ವಿಪಕ್ಷವಾಗಿ ಇಡೀ ದೇಶದಲ್ಲಿ ವಿಫಲವಾಗಿರೋ ವಿಪಕ್ಷ ಎಂದರೆ ಅದು ಕರ್ನಾಟಕದ ಬಿಜೆಪಿ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ದರೋಡೆಗೆ ಕೇಸ್ ಹಿನ್ನೆಲೆ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಹೇಳಿಕೆ ರಾಜಕೀಯ ಮಾತು. ಬಿಜೆಪಿ ವಿರೋಧ ಪಕ್ಷದ ಜವಾಬ್ದಾರಿ ನಡೆಸುತ್ತಿಲ್ಲ. ಸಂಪೂರ್ಣವಾಗಿ ವಿಫಲವಾಗಿರೋ ವಿಪಕ್ಷ ಈ ದೇಶದಲ್ಲಿ ಇದ್ದರೆ ಅದು ಕರ್ನಾಟಕದ ಬಿಜೆಪಿ. ಅವರಿಗೆ ಮಾತಾಡೋ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಈಗ ಮಾತನಾಡುವ ಬಿಜೆಪಿಯ ಎಲ್ಲರು ಹಗರಣಗಳಲ್ಲಿ ಮುಳುಗಿ, ಭ್ರಷ್ಟಾಚಾರ ಮಾಡಿ ಜೈಲುವಾಸ ಅನುಭವಿಸಿರೋ ನಾಯಕರ ಸರ್ಕಾರ ಕೊಟ್ಟಿರೋ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಬಿಜೆಪಿ ಅವರ ಮಾತಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನರಿಗೂ ಅವರು ಏನು ಅಂತ ಗೊತ್ತಾಗಿದೆ. ಬೆಂಗಳೂರು ದರೋಡೆ ಕೇಸ್ ಗಂಭೀರವಾಗಿ ಗೃಹ ಸಚಿವರು ತೆಗೆದುಕೊಂಡಿದ್ದಾರೆ. ಬುಧವಾರ ಸಿಎಂ-ಗೃಹ ಮಂತ್ರಿ ಸಭೆ ಮಾಡಿದ್ದಾರೆ. ಡಿಜಿ ಅವರು ಸಭೆಯಲ್ಲಿ ಇದ್ದರು. ಆದಷ್ಟು ಬೇಗ ಅವರನ್ನ ಪತ್ತೆಹಚ್ಚುವ ವಿಶ್ವಾಸ ಪೊಲೀಸರು ಕೊಟ್ಟಿದ್ದಾರೆ. ಸಿಎಂ ಅವರು ನಿರ್ದೇಶನ ನೀಡಿದ್ದಾರೆ. ಆದಷ್ಟೂ ಬೇಗ ದರೋಡೆ ಮಾಡಿದವರು ಪತ್ತೆ ಆಗುತ್ತಾರೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವೇಳೆ ಕೊಡಗಿಗೆ ಸಚಿವ ಸ್ಥಾನ ಸಿಗೋ ವಿಶ್ವಾಸ ಇದೆ. ಬಹಳ ವರ್ಷಗಳಿಂದ ಕೊಡಗಿಗೆ ಸಚಿವ ಸ್ಥಾನ ಸಿಗಬೇಕು ಅಂತ ಇದೆ. 2009ರಿಂದ ಸಚಿವ ಸ್ಥಾನ ಸಿಕ್ಕಿಲ್ಲ. ಕೊಡಗು ಜಿಲ್ಲೆ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ. ಕ್ರೀಡೆ ಸೇರಿ ಎಲ್ಲಾ ಕ್ಷೇತ್ರದಲ್ಲಿ ಕೊಡುಗೆ ಕೊಟ್ಟಿದೆ. ಅದನ್ನ ಗುರುತಿಸಿ ಮುಂದಿನ ದಿನಗಳಲ್ಲಿ ಕೊಡಗಿಗೆ ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ಹೊರ ಹಾಕಿದರು.
