Ad image

ಬೆಳಗಾವಿ ಅಧಿವೇಶನದಲ್ಲೂ ಮೊಳಗಲಿದೆ ಪ್ರತ್ಯೇಕ ರಾಜ್ಯದ ಕೂಗು: ರಾಜು ಕಾಗೆ ಸೇರಿ 26 ಶಾಸಕರು ಸಿದ್ಧ!

Team SanjeMugilu
2 Min Read

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗುತೀವ್ರಗೊಳ್ಳುವ ಸುಳಿವು ದೊರೆತಿದೆ. ಬೆಳಗಾವಿ  ಅಧಿವೇಶನದಲ್ಲಿ ಶಾಸಕ ರಾಜು ಕಾಗೆ ಸೇರಿ 26 ಶಾಸಕರು ಪ್ರತ್ಯೇಕ ರಾಜ್ಯದ ಬೇಡಿಕೆ ಇಡಲಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಶನಿವಾರ ಮಾಹಿತಿ ನೀಡಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ದೀರ್ಘಕಾಲದಿಂದ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಹಾಗೂ ಅಭಿವೃದ್ಧಿ ನಿರ್ಲಕ್ಷ್ಯದ ಬಗ್ಗೆ ಗಂಭೀರವಾಗಿ ಧ್ವನಿ ಎತ್ತಿದ್ದಾರೆ. ಈ ಪತ್ರ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ನಾಗೇಶ್ ಗೋಲಶೆಟ್ಟಿ ಮಾಹಿತಿ ಪ್ರಕಾರ, ಈಗಾಗಲೇ 1,48,91,346 ಜನ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಡಿಸೆಂಬರ್ 8 ರಂದು ಬೆಳಗಾವಿಯಲ್ಲಿ 26 ಜನ ಶಾಸಕರ ಸಭೆ ಕರೆಯಲಾಗಿದೆ. ಡಿಸೆಂಬರ್ 11 ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಕುರಿತು ಅಧಿಕೃತವಾಗಿ ಧ್ವನಿ ಎತ್ತಲಾಗುತ್ತದೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಯಾರೆಲ್ಲ ಬೆಂಬಲ?
ರಾಜು ಕಾಗೆ ನೇತೃತ್ವದ ಈ ಹೋರಾಟಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಉತ್ತರ ಕನ್ನಡ ಸೇರಿದಂತೆ 15 ಜಿಲ್ಲೆಗಳ ಶಾಸಕರಿಂದ ಪಕ್ಷಾತೀತ ಬೆಂಬಲ ದೊರೆತಿದೆ. ಇವರಲ್ಲಿ ಸಿದ್ದು ಸವದಿ, ವಿಜಯಾನಂದ ಕಾಶಪ್ಪನವರ, ಬಸನಗೌಡ ಪಾಟೀಲ್ ಯತ್ನಾಳ್, ಶರಣು ಸಲಗರ, ಶರಣಪ್ರಕಾಶ ಪಾಟೀಲ್, ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ಜನಾರ್ದನ ರೆಡ್ಡಿ, ನಾರಾ ಭರತ ರೆಡ್ಡಿ ಮತ್ತು ನಿಖಿಲ್ ಕತ್ತಿ ಸೇರಿದಂತೆ ಹಲವರು ಇದ್ದಾರೆ ಎಂದು ನಾಗೇಶ್ ಗೋಲಶೆಟ್ಟಿ ತಿಳಿಸಿದ್ದಾರೆ.

ತೆಲಂಗಾಣ ಮಾದರಿ ಹೋರಾಟಕ್ಕೆ ಸಿದ್ಧ: ನಾಗೇಶ್ ಗೋಲಶೆಟ್ಟಿ
ಬೆಂಗಳೂರಿನ ಅಭಿವೃದ್ಧಿಗೆ ಉತ್ತರ ಕರ್ನಾಟಕದ ಜನರ ಹೋರಾಟ ಹಾಗೂ ಹೂಡಿಕೆ ಕಾರಣವಾಗಿದೆ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ವರ್ಷಗಳಿಂದ ಸರಕಾರ ಅನುದಾನ ಕೊಡದಿರುವುದು ವಿಷಾದನೀಯ. ನಮ್ಮ ಬೇಡಿಕೆಗಳನ್ನು ಸಾಧಿಸಲು ತೆಲಂಗಾಣ ಮಾದರಿಯ ಹೋರಾಟ ನಡೆಸಲು ಸಿದ್ಧರಾಗಿದ್ದೇವೆ ಎಂದು ನಾಗೇಶ್ ಗೋಲಶೆಟ್ಟಿ ಹೇಳಿದ್ದಾರೆ.

ಈಗ ನಾವು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಉಗ್ರ ಹೋರಾಟ ಮಾಡುತ್ತೇವೆ. ಆದರೆ, ಸರ್ಕಾರ ಎಚ್ಚೆತ್ತುಕೊಳ್ಳುವ ಸಾಧ್ಯತೆ ಕಾಣಿಸುತ್ತಿಲ್ಲ. ಬೆಂಗಳೂರಿನ ವಿಧಾನಸೌಧದ ಧ್ವಂಸ ಮಾಡಿದ ಮೇಲೆಯೇ ಸರ್ಕಾರ ಎಚ್ಚೆತ್ತುಕೊಳ್ಳವ ಸಾಧ್ಯತೆಯಿದೆ. ಅಲ್ಲಿಯವರೆಗೂ ನಮ್ಮ ಹೋರಾಟಕ್ಕೆ ಸರ್ಕಾರ ಕಿವಿಕೊಡುವುದಿಲ್ಲ. ಪ್ರತ್ಯೇಕ ರಾಜ್ಯಕ್ಕಾಗಿ ನಾವು ಉಗ್ರ, ಕ್ರೂರ ಮತ್ತು ತೆಲಂಗಾಣ ಮಾದರಿ ಹೋರಾಟ ಮಾಡುತ್ತೇವೆ. ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಸಹ ಬೆಂಬಲಿಸಿದ್ದಾರೆ ಎಂದು ನಾಗೇಶ್ ಗೋಲಶೆಟ್ಟಿ ಹೇಳಿದ್ದಾರೆ.

Share This Article