ದೆಹಲಿ: ರಾಜ್ಯ ರಾಜಕೀಯದಲ್ಲಿ ಪವರ್ ಶೇರಿಂಗ್ ಜಟಾಪಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ, ಜೊತೆಗೆ ಪಕ್ಷದೊಳಗಡೆಯೇ ಬಣ ರಾಜಕೀಯ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ಪರ ಮತ್ತು ಡಿ.ಕೆ ಶಿವಕುಮಾರ್ ಪರ ಎಂದು ಬೆಂಬಲಿಗರು ಕುರ್ಚಿಗಾಗಿ ಬೇಡಿಕೆಗಳನ್ನು ಇಡುತ್ತಿದ್ದಾರೆ. ಈ ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗೆ ಒನ್ ಟು ಒನ್ ಮಹತ್ವದ ಮೀಟಿಂಗ್ ನಡೆಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಉಲ್ಬಣಿಸುತ್ತಿರುವ ನಾಯಕತ್ವ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಒನ್ ಟು ಒನ್ ಮಾತುಕತೆ ನಡೆಸಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ರಾಹುಲ್ ಗಾಂಧಿ- ಪ್ರಿಯಾಂಕ್ ಖರ್ಗೆ ಭೇಟಿ!
ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಮಧ್ಯೆ ನಡೆದ ಈ ಭೇಟಿಯಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ಗೊಂದಲಗಳು, ಸಿಎಂ-ಡಿಸಿಎಂ ಆಂತರಿಕ ಕಲಹ, ಆರ್ಎಸ್ಎಸ್ ನಿಷೇಧ ವಿಚಾರ, ವೋಟ್ ಚೋರಿ ಆರೋಪಗಳು ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬಂದಿದ್ದವು ಎನ್ನಲಾಗಿದೆ. ಸಭೆಯಲ್ಲಿ ರಾಹುಲ್ ಗಾಂಧಿ ಪ್ರಿಯಾಂಕ್ ಖರ್ಗೆ ಅಭಿಪ್ರಾಯವನ್ನೇ ಹೆಚ್ಚು ಆಲಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರಾಹುಲ್ ಗಾಂಧಿ ಅತ್ಯಂತ ಆಪ್ತ ಶ್ರೀವತ್ಸ ಅವರೊಂದಿಗೂ ಪ್ರಿಯಾಂಕ್ ಖರ್ಗೆ ಚರ್ಚೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ.
ಚರ್ಚೆಯ ಮುಖ್ಯ ಅಂಶಗಳೇನು?
ರಾಹುಲ್ ಗಾಂಧಿ ಮತ್ತು ಪ್ರಿಯಾಂಕ್ ಖರ್ಗೆ ನಡೆಸಿದ ಚರ್ಚೆಯ ಮುಖ್ಯ ಅಂಶಗಳೆಂದರೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರ ಪಾಸಿಟಿವ್-ನೆಗೆಟಿವ್ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಆಗುವ ಪರಿಣಾಮಗಳೇನು? ಸಿದ್ದರಾಮಯ್ಯ ಅವರೇ ಮುಂದುವರಿದರೆ ಆಗುವ ಪರಿಣಾಮಗಳೇನು? ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ಏನಾಗುತ್ತದೆ? ಡಿ.ಕೆ.ಶಿಯನ್ನು ಮುಖ್ಯಮಂತ್ರಿ ಮಾಡಿದರೆ ಏನಾಗುತ್ತದೆ? ಎನ್ನುವುದರ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ.
ಇನ್ನೂ ಪ್ರಿಯಾಂಕ್ ಖರ್ಗೆ ರಾಹುಲ್ ಗಾಂಧಿಗೆ ಇಬ್ಬರನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರನ್ನು ಸೈಲೆಂಟ್ ಆಗಿ ಬಿಡಲಾಗುವುದಿಲ್ಲ. ಅವರನ್ನು ಪಕ್ಷ ಕಾಂಗ್ರೆಸ್ ಈಗಲೂ ಬಳಸಿಕೊಳ್ಳಬೇಕು. ಅದಕ್ಕೆ ಪರ್ಯಾಯ ಯೋಜನೆ ಏನು ಎಂಬುದನ್ನು ಯೋಚಿಸಬೇಕು ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷದ ಕಾರ್ಯಕರ್ತರ ಮನೋಭಾವ ಮತ್ತು ಜನಾಭಿಪ್ರಾಯ ಎರಡನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಒತ್ತಾಯವನ್ನೂ ಅವರು ರಾಹುಲ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ಗೆ ತಲೆನೋವಾದ ಆಂತರಿಕ ಕಲಹ!
ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಆಂತರಿಕ ಕಲಹ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇತ್ತೀಚೆಗೆ ಡಿ.ಕೆ.ಶಿ ಬೆಂಬಲಿಗರ ಸಭೆಗಳು, ಸಿದ್ದರಾಮಯ್ಯ ವಿರೋಧಿ ಹೇಳಿಕೆಗಳು, ಒಕ್ಕಲಿಗ ಮುಖಂಡರ ಒತ್ತಡ, ಇವೆಲ್ಲವೂ ಹೈಕಮಾಂಡ್ಗೆ ತಲೆನೋವು ತಂದೊಡ್ಡಿವೆ. ಪ್ರಿಯಾಂಕ್ ಖರ್ಗೆ ರಾಹುಲ್ ಗಾಂಧಿ ಅವರಿಗೆ ರಾಜ್ಯದ ನಿಖರ ಚಿತ್ರಣ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜ್ಯದ ಎಲ್ಲಾ ಬಣಗಳ ಅಭಿಪ್ರಾಯ ತಿಳಿದುಕೊಳ್ಳುವ ಉದ್ದೇಶದಿಂದಲೇ ರಾಹುಲ್ ಪ್ರಿಯಾಂಕ್ ಖರ್ಗೆಯನ್ನು ಕರೆಸಿಕೊಂಡಿದ್ದರು” ಎಂಬ ಮಾತುಗಳು ಕೇಳಿಬರುತ್ತಿವೆ.
ರಾಹುಲ್ ಜೊತೆ ಸಭೆಗೆ ಪ್ರಿಯಾಂಕ್ ವೈಲ್ಡ್ ಕಾರ್ಡ್ ಎಂಟ್ರಿ
