Ad image

ವರದಕ್ಷಿಣೆಗಾಗಿ ಪತ್ನಿ ಮೇಲೆ GBA ಮಾರ್ಷಲ್ ದರ್ಪ ಆರೋಪ – ಮಹಿಳೆ ನೇಣಿಗೆ ಶರಣು

Team SanjeMugilu
2 Min Read

ಬೆಂಗಳೂರು: ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ಬೆಂಗಳೂರಿನ  ಗೋವಿಂದರಾಜನಗರದಲ್ಲಿ ನಡೆದಿದ್ದು, ಪತಿಯ ವಿರುದ್ದ ವರದಕ್ಷಿಣೆ  ಕಿರುಕುಳ ನೀಡಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ನೇಣಿಗೆ ಶರಣಾದ ಮಹಿಳೆಯನ್ನು ಬೆಳಗಾವಿಯ  ಗೋಕಾಕ್ ಮೂಲದ ರೇಖಾ ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಮಾಯಪ್ಪ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೈದಿದ್ದಾನೆ ಎಂದು ರೇಖಾ ಪೋಷಕರು ಆರೋಪಿಸಿದ್ದಾರೆ. ಪ್ರೀತಿಸಿ ಮದುವೆಯಾದ ಜೋಡಿ ಸುಖಸಂಸಾರವನ್ನ ಸಾಗಿಸಬೇಕಾಗಿತ್ತು. ಆದ್ರೆ ಹೋಗ್ತಾ ಹೋಗ್ತಾ ಸಂಸಾರ ಹಳಿ ತಪ್ಪಿತ್ತು ಎನ್ನಲಾಗಿದೆ.

ಸಣ್ಣ ಪುಟ್ಟ ವಿಚಾರಕ್ಕೂ ಮನೆಯಲ್ಲಿ ಗಲಾಟೆ, ಜೊತೆಗೆ ಕುಡಿತದ ಚಟ ಹೊಂದಿದ್ದ ಜಿಬಿಎ ಮಾರ್ಷಲ್  ಮನೆಗೆ ಬಂದು ಹೆಂಡತಿ ಮೇಲೆ ದರ್ಪ ತೋರಿಸುತ್ತಿದ್ದ. ಅಷ್ಟೇ ಅಲ್ಲದೇ ವರದಕ್ಷಿಣೆ ಕಿರುಕುಳ ಕೂಡ ನೀಡ್ತಿದ್ದನಂತೆ. ಇದರಿಂದ ಬೇಸೆತ್ತ ಮಹಿಳೆ ನೇಣಿನ ಕುಣಿಕೆಗೆ ಶರಣಾಗಿದ್ದಾಳೆ. ಇದು ಆತ್ಮಹತ್ಯೆ ಅಲ್ಲವೇ ಅಲ್ಲ ಕೊಲೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನೂ ರೇಖಾ ಸಾವು ಇಬ್ಬರು ಪುಟ್ಟ ಮಕ್ಕಳು ಅನಾಥರಾಗುವಂತೆ ಮಾಡಿದೆ.

ಪತಿ ಪತ್ನಿ ಇಬ್ಬರು ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದವರು. ರೇಖಾ ಕಾಲೇಜಿಗೆ ಹೋಗ್ತಿದ್ದಾಗ ಅದೇ ಕಾಲೇಜಿನಲ್ಲಿ ಮಾಯಪ್ಪ ಕ್ಲರ್ಕ್ ಆಗಿದ್ದ. ಅಲ್ಲಿ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ಅದೇ ಪ್ರೀತಿ ಮದುವೆಯಲ್ಲಿ ಆರಂಭವಾಗಿ ಈಗ ರೇಖಾಳ ಅಹಸಜ ಸಾವಿನಲ್ಲಿ ಕೊನೆಯಾಗಿದೆ.

ಕಳೆದ ಆರು ವರ್ಷದ ಹಿಂದೆ ಇಬ್ಬರು ವಿವಾಹವಾಗಿದ್ರು. ಮಾಯಪ್ಪ ಬೆಂಗಳೂರಿಗೆ ಬಂದು ಬಿಬಿಎಂಪಿ ಮಾರ್ಷಲ್ ಆಗಿ ಕೆಲಸ ಮಾಡಿಕೊಂಡಿದ್ದ. ಬೆಂಗಳೂರಿನ ಗೋವಿಂದರಾಜನಗರದಲ್ಲಿ ಬಾಡಿಗೆ ಮನೆ ಪಡೆದು 4 ವರ್ಷದ ಮಗಳು ಹಾಗೂ 2 ವರ್ಷದ ಮಗನ ಜೊತೆಗೆ ವಾಸವಿದ್ದರು. ಆದ್ರೆ ಕುಡಿತದ ಚಟಕ್ಕೆ ಬಿದ್ದ ಆಸಾಮಿಯು ರೇಖಾಳಿಗೆ ಹಿಂಸೆ ಕೊಡಲು ಪ್ರಾರಂಭಿಸಿದ್ದ. ವರದಕ್ಷಿಣೆ ಹಣ ತರುವಂತೆ ಪೀಡಿಸ್ತಿದ್ದ. ಇದರಿಂದಾಗಿ ಆಕೆ ಮನನೊಂದು ನೇಣಿಗೆ ಕೊರಳೊಡ್ಡಿದ್ದಾಳೆ.

ನನ್ನ ಮಗಳು ಒಳ್ಳೆಯವಳು, ಅವಳ ಗಂಡ ಕುಡಿದು ಹೊಡೆಯುತ್ತಿದ್ದ, ವರದಕ್ಷಿಣೆಗಾಗಿ ಪೀಡಿಸುತ್ತಿದ್ದ, ಚಿನ್ನ ಬೆಳ್ಳಿಯನ್ನ ನೀಡಿದ್ರು, ಅವನ ಹಿಂಸೆ ನಿಂತಿಲ್ಲ, ಅವನೇ ಕೊಲೆ ಮಾಡಿದ್ದಾನೆ. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು, ಈ ಇಬ್ಬರು ಸಣ್ಣ ಮಕ್ಕಳಿಗೆ ಯಾರು ಹೊಣೆ, ಎಂದು ರೇಖಾಳ ತಂದೆ ಕಣ್ಣಿರಿಟ್ಟಿದ್ದಾರೆ.

ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದರಾಜನಗರ ಠಾಣೆ ಪೊಲೀಸರು ಮಾಯಪ್ಪನನ್ನ ವಶಕ್ಕೆ ಪಡೆದಿದ್ದಾರೆ. ಘಟನೆಗೆ ನಿಖರ ಕಾರಣ ಏನು ಅನ್ನೋದು ತನಿಖೆಯಿಂದ ಹೊರಬರಬೇಕಾಗಿದೆ.

Share This Article