Ad image

ರಾಜ್ಯದಲ್ಲೇ ಅತಿಹೆಚ್ಚು ಪ್ರವಾಸಿ ಸ್ಥಳ ಗುರುತು – ಸಕ್ಕರೆ ನಗರಿಗೆ ಮತ್ತೊಂದು ಗರಿಮೆ

Team SanjeMugilu
2 Min Read

ಮಂಡ್ಯ: ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನ  ಹೊಂದಿರುವ ಮಂಡ್ಯ ಜಿಲ್ಲೆ. ಅತಿಹೆಚ್ಚು ಪ್ರವಾಸಿ ತಾಣಗಳನ್ನ ಹೊಂದಿರುವ ಹಿರಿಮೆಗೆ ಪಾತ್ರವಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ 106 ಪ್ರವಾಸಿ ತಾಣಗಳನ್ನ ಗುರುತಿಸಿದ್ದು, ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜ್ಯದಲ್ಲಿಯೇ ಮಂಡ್ಯ ಅಗ್ರ ಸ್ಥಾನ ಪಡೆದಿದೆ.

ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಪ್ರವಾಸಿ ಸ್ಥಳಗಳು ಹಾಗೂ ಪ್ರವಾಸಿಗರ ಭೇಟಿಯ ಅಂಕಿ ಸಂಖ್ಯೆಗಳನ್ನೊಳಗೊಂಡ ಸಂಪೂರ್ಣ ವಿವರ ಹಾಗೂ ಛಾಯಚಿತ್ರಗಳೊಂದಿಗೆ ಪ್ರವಾಸಿ ತಾಣಗಳ ಪಟ್ಟಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಆಯುಕ್ತರು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಸೂಚಿಸಿದ್ದರು.

ಪ್ರವಾಸೋದ್ಯಮ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ರಾಜ್ಯದಲ್ಲಿ 1,275 ಪ್ರವಾಸಿ ತಾಣಗಳ ಪಟ್ಟಿ ಮಾಡಿ ಕಳುಹಿಸಿಕೊಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 106 ಪ್ರವಾಸಿ ಸ್ಥಳಗಳನ್ನ ಗುರುತಿಸಲಾಗಿದ್ದು, ಅತಿಹೆಚ್ಚು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮಂಡ್ಯದಲ್ಲಿ ಅಗ್ರ ಸ್ಥಾನ ಪಡೆದರೇ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅತೀ ಕಡಿಮೆ ಪ್ರವಾಸಿ ಸ್ಥಳಗಳನ್ನ ಗುರುತು ಮಾಡಿರುವುದು ಕಂಡು ಬಂದಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಸಿದ್ಧ ಪ್ರವಾಸಿ ತಾಣಗಳನ್ನ ಹೊಂದಿದೆ. ಅವು ಸ್ಥಳೀಯರಿಗೆ ಬಿಟ್ಟರೆ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅವುಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನ ಗುರುತಿಸಿ ಅವುಗಳಿಗೆ ಬೂಸ್ಟ್ ನೀಡುವ ಸಲುವಾಗಿ ಹಾಗೂ ಪ್ರವಾಸಿಗರಿಗೆ ಪರಿಚಯಿಸುವ ಮುಖ್ಯ ಉದ್ದೇಶದಿಂದ ಪ್ರವಾಸಿ ಸ್ಥಳಗಳನ್ನು ಗುರಿತಿಸಲಾಗುತ್ತಿದೆ.

ಉಳಿದಂತೆ ಬೆಳಗಾವಿ 100, ಚಿಕ್ಕಬಳ್ಳಾಪುರ 95, ಉತ್ತರ ಕನ್ನಡ 85 ಪ್ರವಾಸಿ ತಾಣಗಳನ್ನ ಗುರುತಿಸುವ ಮೂಲಕ ನಂತರದ ಸ್ಥಾನವನ್ನು ಹಂಚಿಕೊಂಡಿವೆ. ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕೇವಲ 13 ಪ್ರವಾಸಿ ತಾಣಗಳ ಪಟ್ಟಿಯನ್ನಷ್ಟೇ ಕಳುಹಿಸಿಕೊಡಲಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಡುವೆ ಹಾದುಹೋಗುವ ಮಂಡ್ಯದಲ್ಲಿ ವಿಶ್ವವಿಖ್ಯಾತ ಪ್ರವಾಸಿ ತಾಣಗಳಿದ್ದು, ದೇಶ-ವಿದೇಶಿಗರನ್ನ ಆಕರ್ಷಿಸುತ್ತಿದೆ. ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ಮೂಲಕ ಮಂಡ್ಯ ಜಿಲ್ಲೆ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ.

ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು
ವಿಶ್ವವಿಖ್ಯಾತ ಕೆ.ಆರ್.ಎಸ್. ಬೃಂದಾವನ, ಮೇಲುಕೋಟೆ ಚಲುವನಾರಾಯಣ ಸ್ವಾಮಿ, ಕರಿಘಟ್ಟ, ದಕ್ಷಿಣ ಪಕ್ಷಿಕಾಶಿ ರಂಗನತಿಟ್ಟು ಪಕ್ಷಿಧಾಮ, ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀರಂಗನಾಥ ಸ್ವಾಮಿ ದೇವಾಲಯ, ಹೊಸಹೊಳಲು ಹೊಯ್ಸಳೇಶ್ವರ ದೇವಾಲಯ, ಏಷ್ಯ ಖಂಡದಲ್ಲೇ ಮೊದಲ ವಿದ್ಯುತ್ ಸ್ಥಾವರ ಕೇಂದ್ರ ಶಿವನಸಮುದ್ರ, ಶ್ರೀರಂಗಪಟ್ಟಣ ಕೋಟೆ ಪ್ರದೇಶ, ಕೆರೆತೊಣ್ಣೂರು, ವೇಣುಗೋಪಾಲಸ್ವಾಮಿ ದೇವಾಲಯ, ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಳದ ಸೌಮ್ಯಕೇಶವ ದೇವಾಲಯ, ಹೇಮಗಿರಿ ಫಾಲ್ಸ್, ಇತ್ತೀಚೆಗೆ ಕಲ್ಲಹಳ್ಳಿಯ ಭೂವರಹನಾಥಸ್ವಾಮಿ ದೇವಾಲಯ ಸಾಕಷ್ಟು ಹೆಸರುವಾಸಿಯಾಗಿದ್ದು, ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಶ್ರೀರಂಗಪಟ್ಟಣದಲ್ಲಿ ಹೆಚ್ಚು ಪ್ರವಾಸಿ ಸ್ಥಳ
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 106 ಪ್ರವಾಸಿ ಸ್ಥಳಗಳನ್ನ ಗುರುತಿಸಿದ್ದು, ಈ ಪೈಕಿ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಅತೀ ಹೆಚ್ಚು, ನಾಗಮಂಗಲ ತಾಲ್ಲೂಕು ಅತೀ ಕಡಿಮೆ ಅತೀ ಕಡಿಮೆ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಇನ್ನೂ ತಾಲೂಕುವಾರು ನೋಡುವುದಾದ್ರೆ ಶ್ರೀರಂಗಪಟ್ಟಣ 24, ಮದ್ದೂರು ಹಾಗೂ ಕೆ.ಆರ್.ಪೇಟೆ ತಲಾ 18, ಪಾಂಡವಪುರ 13, ಮಂಡ್ಯ 12, ಮಳವಳ್ಳಿ 11 ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ 10 ಪ್ರವಾಸಿ ತಾಣಗಳನ್ನು ಗುರುತು ಮಾಡಲಾಗಿದೆ.

Share This Article