ಹಾಸನ : ನಾಯಕತ್ವ ಬದಲಾವಣೆ, ಕುರ್ಚಿ ಕಾದಾಟದ ಕಿಚ್ಚು ಜೋರಾಗಿರುವಾಗಲೇ ದಲಿತ ಸಿಎಂ ಚರ್ಚೆ ಕೂಡ ಮುನ್ನಲೆಗೆ ಬಂದಿದೆ. ಸಿಎಂ ಸ್ಥಾನಕ್ಕೆ ಹೈಕಮಾಂಡ್ ಲೆವೆಲ್ನಲ್ಲಿ ಡಿಕೆ ಬ್ರದರ್ಸ್ ಲಾಬಿ ಮಾಡ್ತಿದ್ದಾರೆ. ಇತ್ತ ಕುರ್ಚಿ ಖಾಲಿ ಇಲ್ಲ, 5 ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದ್ದಾರೆ. ಈ ಕುರ್ಚಿ ಕಾದಾಟದ ನಡುವೆ ನಾನು ಕೂಡ ಸಿಎಂ ಆಕಾಂಕ್ಷಿ ಎನ್ನುತ್ತಾ ಪರಮೇಶ್ವರ್ ದಲಿತ ಸಿಎಂ ದಾಳ ಉರುಳಿಸಿದ್ರು. ಈ ಎಲ್ಲ ಗದ್ದಲಗಳು ತಿಳಿಯಾಗುತ್ತಿರುವಾಗಲೇ ಗೃಹ ಸಚಿವ ಪರಮೇಶ್ವರ್ ಅವ್ರು ಕೋಡಿಮಠದ ಶ್ರೀಗಳನ್ನ ದಿಢೀರ್ ಭೇಟಿಯಾಗಿದ್ದು, ಗೌಪ್ಯ ಸಭೆ ಕೂಡ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೋಡಿಮಠಕ್ಕೆ ಗೃಹ ಸಚಿವ ಪರಂ ಭೇಟಿ
ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಹಾಸನದ ಕೋಡಿಮಠಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ದಿಢೀರ್ ಭೇಟಿ ನೀಡಿದ್ದಾರೆ. ಇದು ಪೂರ್ವ ನಿಗದಿತ ಭೇಟಿಯಲ್ಲ. ಸ್ಥಳೀಯ ಮುಖಂಡರಿಗೂ ಮಾಹಿತಿ ನೀಡದೆ ಗೃಹ ಸಚಿವ ಪರಮೇಶ್ವರ್ ಅವ್ರು ಕೋಡಿಶ್ರೀಗಳನ್ನ ಭೇಟಿ ನೀಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
1 ಗಂಟೆಗಳ ಕಾಲ ಸ್ವಾಮೀಜಿಗಳ ಜೊತೆ ಗೌಪ್ಯ ಸಭೆ
ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದ ಪರಮೇಶ್ವರ್ ಅವ್ರು, ಸುಮಾರು ಒಂದು ಗಂಟೆಗೆ ಹೆಚ್ಚು ಕಾಲ ಸ್ವಾಮೀಜಿಯೊಂದಿಗೆ ಗೌಪ್ಯ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನಾನು ಸಿಎಂ ಆಕಾಂಕ್ಷಿ ಎಂದಿದ್ದ ಪರಂ
ಗೃಹ ಸಚಿವ ಪರಮೇಶ್ವರ್ ಅವ್ರು ಕೂಡ ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಎಂ ಸ್ಥಾನದ ವಿಚಾರ ಬಂದಾಗ ಪರಮೇಶ್ವರ್ ನಾನು ಕೂಡ ಆಕಾಂಕ್ಷಿ ಎಂದಿದ್ದಾರೆ. ಇತ್ತೀಚಿನ ಕುರ್ಚಿ ಕಾದಾಟದ ವಿಚಾರದ ವೇಳೆ ಕೂಡ ದಲಿತ ಸಿಎಂ ವಿಷಯ ಮುನ್ನಲೆಗೆ ಬಂದಾಗ ಪರಮೇಶ್ವರ್ ಹೆಸರು ಮೊದಲ ಸ್ಥಾನದಲ್ಲಿದೆ.
