ಕೊಪ್ಪಳ: ಹನುಮ ಹುಟ್ಟಿದ ಪವಿತ್ರ ತೀರ್ಥಭೂಮಿ ಅಂಜನಾದ್ರಿ ಬೆಟ್ಟ ಇಂದು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಡಿಸೆಂಬರ್ 2 ಮತ್ತು 3ರಂದು ನಡೆಯಲಿರುವ ಹನುಮ ಮಾಲೆ ವಿಸರ್ಜನೆಗಾಗಿ ಭಕ್ತರ ಸಾಗರವೇ ಹರಿದು ಬರುತ್ತಿದೆ. ಜಿಲ್ಲಾಡಳಿತದ ಅಂದಾಜು ಪ್ರಕಾರ, ಈ ಬಾರಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತರು ಅಂಜನಾದ್ರಿಗೆ ಆಗಮಿಸುವ ಸಾಧ್ಯತೆ ಇದೆ.
ಹನುಮ ವೃತ ಹಿಡಿದ ಭಕ್ತಾದಿಗಳು ನೂರಾರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ಅಂಜನಾದ್ರಿ ಬೆಟ್ಟಕ್ಕೆ ಬರಲು ಆರಂಭಿಸಿದ್ದು, ಜಾಗತೆ ಮಾಡುವ ಸಲುವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ಸೇರಿ ಭಾರಿ ಸಿದ್ಧತೆ ನಡೆಸಲಾಗಿದೆ. ಪರ್ವತಾರೋಹಣಕ್ಕೆ ಬರುವ ಭಕ್ತರಿಗೆ ಮಾರ್ಗ ಮಧ್ಯೆ ಎಂಟು ಕಡೆಗಳಲ್ಲಿ ವಿಶ್ರಾಂತಿ ಕೇಂದ್ರಗಳು, ಕುಡಿಯುವ ನೀರು, ಊಟ ಮತ್ತು ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ.
ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಹನುಮ ಜನ್ಮಸ್ಥಾನಕ್ಕೆ ಸಂಬಂಧಿಸಿದ ಹಲವು ಕುರುಹುಗಳು ಇರುವುದು ಇಲ್ಲಿ ನಡೆಯುವ ಹನುಮ ಮಾಲೆಯ ಸಾಂಪ್ರದಾಯಿಕ ಮಹತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಕೇವಲ 13 ಜನರಿಂದ ಆರಂಭವಾದ ಹನುಮ ಮಾಲೆ ವೃತ, ಈಗ ಲಕ್ಷಾಂತರ ಭಕ್ತರ ಸಮೂಹಿಕ ಆಚರಣೆಯಾಗಿ ಬೆಳೆದಿದೆ. ಕೆಲವರು 45 ದಿನ, ಕೆಲವರು 30, 15, 9 ಅಥವಾ 3 ದಿನ ವೃತ ಕಟ್ಟಿಕೊಂಡು ಅಂಜನಾದ್ರಿಗೆ ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡುತ್ತಾರೆ.
ಭಕ್ತರ ಭಾರಿ ದಟ್ಟಣೆಯನ್ನು ಗಮನಿಸಿ ಕೊಪ್ಪಳದಿಂದ ಅಂಜನಾದ್ರಿವರೆಗೆ ಸುಮಾರು 2,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲು ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ನಿಯಂತ್ರಣ, ಭದ್ರತೆ ಮತ್ತು ವೈದ್ಯಕೀಯ ತಂಡಗಳನ್ನೂ ಸಜ್ಜುಗೊಳಿಸಲಾಗಿದೆ.
ಇದಲ್ಲದೆ, ಈ ಬಾರಿ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಮತ್ತೊಂದು ರಾಜಕೀಯ–ಸಾಮಾಜಿಕ ವಿವಾದ ತಲೆದೋರಿದೆ. ಜಿಲ್ಲೆಯಲ್ಲಿ ಕಳೆದ 39 ದಿನಗಳಿಂದ ಕಾರ್ಖಾನೆಗಳ ವಿರುದ್ಧ ಬಚಾವೋ ಆಂದೋಲನ ನಡೆಯುತ್ತಿದ್ದರೂ, ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ಕಾರ್ಯಕ್ರಮದ ಸಿದ್ಧತೆಗೆ ಕಿರ್ಲೋಸ್ಕರ್, ಮುಕುಂದ ಸುಮಿ, ಅಲ್ಟಾ ಟೆಕ್, ಹೊಸಪೇಟೆ ಸ್ಟೀಲ್ ಸೇರಿದಂತೆ ಹಲವು ಕಾರ್ಖಾನೆಗಳ CSR ನಿಧಿ ಬಳಸಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಂಸದ ರಾಜಶೇಖರ ಹಿಟ್ನಾಳ್ ಅವರು ಧಾರ್ಮಿಕ ಉತ್ಸವಕ್ಕೆ ಕೈಗಾರಿಕಾ CSR ನಿಧಿ ಬಳಸಿಕೊಳ್ಳುತ್ತಿರುವುದು ಪ್ರಶ್ನೆಗೆ ಗುರಿಯಾಗಿದೆ. “ಭಕ್ತರ ಉಪಯೋಗಕ್ಕಾಗಿ ಕಾರ್ಯಕ್ರಮ ಮಾಡೋದು ಚೆನ್ನೇ, ಆದರೆ ಅದಕ್ಕೆ ಕೈಗಾರಿಕಾ ಹಣ ಯಾಕೆ ಬೇಕು?” ಎಂಬ ಪ್ರಶ್ನೆ ಸ್ಥಳೀಯರು ಮತ್ತು ಪರಿಸರ ಹೋರಾಟಗಾರರಿಂದ ಕೇಳಿಬರುತ್ತಿದೆ.
ಇದ್ದರೂ, ಅಂಜನಾದ್ರಿ ಬೆಟ್ಟದಲ್ಲಿ ಹನುಮ ಭಕ್ತರ ಭಕ್ತಿ–ಭಾವದ ಜಾತ್ರೆ ಈಗಾಗಲೇ ಚುರುಕುಗೊಂಡಿದ್ದು, ಕೋಟ್ಯಾಂತರ ಭಕ್ತರ ಮನಸ್ಸಿನಲ್ಲಿ ದೈವದರ್ಶನದ ಚೈತನ್ಯ ತುಂಬುತ್ತಿದೆ.
