ಬೆಂಗಳೂರು: ಮೆಟ್ರೋ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು ನೀಡಿದೆ. ನಮ್ಮ ಮೆಟ್ರೋ ನಿಲ್ದಾಣಗಳು, ಶೌಚಾಲಯಗಳು, ಹಸಿರು ಪ್ರದೇಶಕ್ಕೆ ಮೀಡಲಾಗಿದ್ದ ಸರ್ಕಾರಿ ಜಾಗವನ್ನು ಖಾಸಗಿ ಹೋಟೆಲ್ ಉದ್ಯಮಿಗಳಿಗೆ ಕೊಟ್ಟು ಅಕ್ರಮ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಈ ವಿಚಾರವಾ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಬಿಜೆಪಿ ನಗರ ಘಟಕದ ಅಧ್ಯಕ್ಷ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ನೇತೃತ್ವದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಮೆಟ್ರೋ ಮಾರ್ಗದಲ್ಲಿ ಅಕ್ರಮ ವಾಣಿಜ್ಯ ಮಳಿಗೆಗಳಿಗೆ ಅವಕಾಶ ಮಾಡಿಕೊಟ್ಟಿರುವ ಗಂಭೀರ ಆರೋಪ ಮಾಡಿದೆ.
ಆರ್‌ವಿ ರೋಡ್‌ನಲ್ಲಿ ಹೋಟೆಲ್ ರಾಜಕೀಯ?
ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದ ಸುತ್ತಮುತ್ತ ಹಾಗೂ ಮೆಟ್ರೋ ಮಾರ್ಗದ ಜಾಗದಲ್ಲಿ ಖಾಸಗಿ ಹೋಟೆಲ್ ಉದ್ಯಮಿಗಳಿಗೆ ಮಳಿಗೆಗಳನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ ಎಂಬ ಆರೋಪವಿದೆ. ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಶೌಚಾಲಯ, ಪಾರ್ಕಿಂಗ್, ಹಸಿರು ವಲಯಕ್ಕೆ ಮೀಸಲಿಟ್ಟಿದ್ದ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಡಲಾಗುತ್ತಿದೆ. ಇದು ಸಂಪೂರ್ಣ ಕಾನೂನು ಬಾಹಿರ ಎಂದು ಶಾಸಕ ರಾಮಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತಕ್ಕೆ ನೀಡಿದ್ದ ದೂರಿನಲ್ಲಿ ಏನೆಲ್ಲಾ ಇದೆ?
ಮೆಟ್ರೋ ಮಾರ್ಗದಲ್ಲಿ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾದ ಜಾಗವನ್ನು ಖಾಸಗಿ ವಾಣಿಜ್ಯ ಚಟುವಟಿಕೆಗೆ ಬಳಸಲಾಗುತ್ತಿದೆ. ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ಲಂಚ ಪಡೆದು ಅಕ್ರಮ ಅನುಮತಿ ನೀಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಆರ್‌ವಿ ರಸ್ತೆಯಲ್ಲಿ ಈಗಾಗಲೇ ಹಲವು ಹೋಟೆಲ್ ಮಳಿಗೆಗಳು ಎದ್ದು ನಿಂತಿವೆ, ಇದರಿಂದ ಸಾರ್ವಜನಿಕರಿಗೆ ತೊಂದರೆ, ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪ ಮಾಡಿದ್ದಾರೆ.
ಹೈಕೋರ್ಟ್‌ನಲ್ಲಿ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (PIL) ದಾಖಲಿಸಲು ತೀರ್ಮಾನ ಮಾಡಲಾಗಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸೌಧದಲ್ಲಿ ಸರ್ಕಾರದ ಗಮನ ಸೆಳೆಯಲು ಬಿಜೆಪಿ ತಂಡ ಸಿದ್ಧತೆ ಮಾಡಿಕೊಂಡಿದೆ. ಅಕ್ರಮ ಮಳಿಗೆಗಳ ತೆರವುಗೊಳಿಸುವಂತೆ ಒತ್ತಾಯ ಮಾಡಲಾಗುವುದು.
ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ!
ದೂರು ನೀಡಿದ ಬಳಿಕ ಶಾಸಕ ರಾಮಮೂರ್ತಿ, ನಾವು ಲೋಕಾಯುಕ್ತಕ್ಕೆ ಎಲ್ಲ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದೇವೆ. ಮೆಟ್ರೋ ಜಾಗವನ್ನು ಖಾಸಗಿ ವ್ಯಾಪಾರಕ್ಕೆ ಬಿಟ್ಟುಕೊಡುವುದು ದೊಡ್ಡ ಭ್ರಷ್ಟಾಚಾರ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಬಯಲಾಗಲಿದೆ. ಜನರ ಹಣದಿಂದ ಮೆಟ್ರೋ ಕಟ್ಟಿದ್ದಾರೆ, ಆ ಜಾಗ ಜನರದ್ದೇ ಆಗಿರಬೇಕು, ಖಾಸಗಿ ಹೋಟೆಲ್ ಉದ್ಯಮಿಗಳದ್ದಲ್ಲ. ಲೋಕಾಯುಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ ಎಂದು ಸಿ.ಕೆ. ರಾಮಮೂರ್ತಿ ಆಕ್ರೋಶದಿಂದ ಹೇಳಿದ್ದಾರೆ.
ಈ ಆರೋಪಗಳ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ ನಿಗಮದ ಅಧಿಕಾರಿಗಳು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಆಂತರಿಕ ಮೂಲಗಳ ಪ್ರಕಾರ, “ಕೆಲವು ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಅನುಮತಿ ನೀಡಲಾಗಿದೆ, ಆದರೆ ಅದು ಕಾನೂನು ಚೌಕಟ್ಟಿನೊಳಗೆ” ಎಂಬ ನಿಲುವು ತಾಳಲಾಗುತ್ತದೆ. ಆದರೆ ಬಿಜೆಪಿ ಮಾತ್ರ ಈ ವಿಚಾರವನ್ನು ದೊಡ್ಡದಾಗಿ ಎತ್ತಿಹಿಡಿದು ರಾಜಕೀಯವಾಗಿ ಬಳಸಿಕೊಳ್ಳುವ ತಯಾರಿಯಲ್ಲಿದೆ.
ಮೆಟ್ರೋ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿಯಿಂದ ದೂರು!
