Ad image

ದೆಹಲಿ ಸ್ಫೋಟಕ್ಕೂ ಬೆಂಗಳೂರು ಜೈಲಿನಲ್ಲಿ ಉಗ್ರ ಮೊಬೈಲ್ ಬಳಸಿದ್ದಕ್ಕೂ ಇದೆಯಾ ನಂಟು? ಎನ್​ಐಎ ತೀವ್ರ ತನಿಖೆ

Team SanjeMugilu
2 Min Read

ಬೆಂಗಳೂರು: ದೆಹಲಿ ಬ್ಲಾಸ್ಟ್ ನಂತರ ಎನ್ಐಎ ಚುರುಕಿನ ಕಾರ್ಯಚರಣೆ ನಡೆಸುತ್ತಿದೆ. ಇದೀಗ ಈ ಬ್ಲಾಸ್ಟ್​ಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಮೊಬೈಲ್ ಬಳಕೆ ಮಾಡಿರುವುದಕ್ಕೂಸಂಬಂಧ ಇದೆಯಾ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಮತ್ತೆ ಎನ್​​​ಐಎ ಜೈಲಿಗೆ ಭೇಟಿ ನೀಡಿದ್ದಾರೆ. ಈಗಾಗಲೇ ಎನ್ಐಎ ದೇಶದ ಹಲವು ಕಡೆ ದಾಳಿಯನ್ನು ನಡೆಸಿ, ಹಲವು ದಾಖಲೆಗಳು ವಶಪಡಿಸಿಕೊಂಡ ತನಿಖೆಯನ್ನು ನಡೆಸುತ್ತಿದೆ. ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರರು ಹಾಗೂ ರೌಡಿಶೀಟರ್​​​ಗಳು ಮೊಬೈಲ್​​​​​ ಉಪಯೋಗಿಸುತ್ತಿದ್ದರು ಎಂಬ ವಿಡಿಯೋ ವೈರಲ್​​ ಆಗಿತ್ತು. ಈ ವಿಚಾರ ಕರ್ನಾಟಕ ಸರ್ಕಾರಕ್ಕೂ ತಲೆನೋವುವಾಗಿತ್ತು. ಜುಹಾದ್ ಹಮೀದ್ ಶಕೀಲ್ ಮನ್ನಾ ಕೈಯಲ್ಲಿ ಮೊಬೈಲ್​​ ಇರುವ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಎನ್​​​ಐಎ ಅಧಿಕಾರಿಗಳು ಬೆಂಗಳೂರು ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ತನಿಖೆಯ ಸ್ವಲ್ಪ ಸಮಯದ ನಂತರ ದೆಹಲಿಯಲ್ಲಿ ಕಾರು ಬ್ಲಾಸ್​ಟ್​​ ಆಗಿದೆ. ಇದೀಗ ಬೆಂಗಳೂರು ಜೈಲಿನಲ್ಲಿರುವ ಉಗ್ರನಿಗೂ ದೆಹಲಿ ಬ್ಲಾಸ್ಟ್​​​ಗೂ ಸಂಬಂಧ ಇರಬಹುದು ಎಂಬ ಅನುಮಾನ ಶುರುವಾಗಿದೆ. ಈ ಬ್ಲಾಸ್ಟ್​​ಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾಗೂ ಲಿಂಕ್​​ ಇದೆಯಾ ಎಂಬ ಅನುಮಾನುಗಳು ಹುಟ್ಟಿಕೊಂಡಿದೆ. ಈ ಕಾರಣಕ್ಕೆ ಎನ್ಐಎ ಇದೀಗ ಮತ್ತೊಮ್ಮೆ ಜೈಲಿಗೆ ಭೇಟಿ ನೀಡಿದೆ.

ಎನ್ಐಎ ತಂಡ ಈಗಾಗಲೇ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಈ ವೇಳೆ ಜುಹಾದ್ ಹಮೀದ್ ಶಕೀಲ್ ಮನ್ನಾ ವಿಚಾರಣೆಯನ್ನು ಕೂಡ ಎನ್ಐಎ ಅಧಿಕಾರಿಗಳು ನಡೆಸಿದ್ದಾರೆ. ಅಧಿಕಾರಿಗಳು ಈಗಾಗಲೇ ಹಲವು ಮಾಹಿತಿಗಳನ್ನು ಹಾಗೂ ದಾಖಲೆಗಳನ್ನು ಪಡೆದುಕೊಂಡು, ಈ ಉಗ್ರ ಜೈಲಿನಲ್ಲಿದ್ದುಕೊಂಡು ಯಾರನೆಲ್ಲ ಸಂಪರ್ಕಿಸಿದ್ದಾನೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜತೆಗೆ ದೆಹಲಿ ಬ್ಲಾಸ್ಟ್​​ ಬಗ್ಗೆಯೂ ಅಧಿಕಾರಿಗಳು ಜುಹಾದ್ ಹಮೀದ್ ಶಕೀಲ್ ಮನ್ನಾ ಬಳಿ ಕೇಳಿದ್ದಾರೆ.

ಲಷ್ಕರ್ ಉಗ್ರ ಮೊಬೈಲ್ ಬಳಸುತ್ತಿರುವ ವಿಡಿಯೋ:
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯಗಳು ಸಿಗುತ್ತಿದೆ ಎಂಬ ಆರೋಪ ಕೂಡ ಬಂದಿತ್ತು. ಈ ಬೆನ್ನಲ್ಲೇ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಮೊಬೈಲ್​​ ಬಳಸಿರುವ ವಿಡಿಯೋ ವೈರಲ್​​ ಆಗಿತ್ತು. ಈತ ಯುವಕರನ್ನು ಐಸಿಸ್ ಉಗ್ರ ಸಂಘಟನೆಗೆ ನೇಮಕ ಮಾಡುತ್ತಿದ್ದ ಎಂಬ ಆರೋಪ ಇತ್ತು. ಇನ್ನು ಜೈಲಿನಲ್ಲಿ ನಡೆಯುವ ಇಂತಹ ಕೃತ್ಯಗಳ ಬಗ್ಗೆ 35 ವರ್ಷಗಳ ಕಾಲ ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್.ಕೆ. ಉಮೇಶ್ ಅವರು ಟಿವಿ9 ಜತೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು, ಹಿಂದೆ ಕೂಡ ಜೈಲುಗಳಲ್ಲಿ ಇಂತಹ ಅಕ್ರಮಗಳು ನಡೆಯುತ್ತಿದ್ದವು. ಆದರೆ, ಜೈಲಿನೊಳಗೆ ಮೊಬೈಲ್ ಬಳಕೆ ಮತ್ತು ಇತರ ವಿಐಪಿ ಸೌಲಭ್ಯಗಳು ದೇಶದ ದೃಷ್ಟಿಯಿಂದ ಅಭದ್ರತೆಯನ್ನು ಸೃಷ್ಟಿಸುತ್ತವೆ ಎಂದು ಹೇಳಿದರು.

ದೆಹಲಿ ಬ್ಲಾಸ್ಟ್ ಬಗ್ಗೆ ತನಿಖೆ​​:
ದೆಹಲಿಯ ಕೆಂಪುಕೋಟೆ ಸಮೀಪದ ಪ್ರಮುಖ ರಸ್ತೆಯಲ್ಲಿ ನಡೆದ ಐ20 ಕಾರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಅನೇಕ ಕಡೆ ತನಿಖೆ ನಡೆಸುತ್ತಿದ್ದಾರೆ. ಅದರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂಡ ಒಂದು, ದೆಹಲಿ ಬ್ಲಾಸ್ಟ್​​​ ನಂತರ ದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪ್ರತಿಯೊಂದು ವಿಚಾರದಲ್ಲೂ ಕೂಡ ಎಚ್ಚರಿಕೆಯ ಹೆಜ್ಜೆಯನ್ನು ಇಡಲಾಗುತ್ತಿದೆ. ಈ ಬ್ಲಾಸ್ಟ್​​​ನಿಂದ 13 ಜನರು ಸಾವನ್ನಪ್ಪಿದರು. ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣದ ಹಿಂದಿರುವ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಇದೊಂದು ಭಯೋತ್ಪಾದಕ ದಾಳಿ ಎಂದು ಹೇಳಲಾಗಿದೆ.

Share This Article