ಬೆಂಗಳೂರು: ಸಿಲ್ಕ್ ಬೋರ್ಡ್ ಭಾಗದ ಸವಾರರು ಕಳೆದ ಹಲವು ವರ್ಷಗಳಿಂದ ಟ್ರಾಫಿಕ್ ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಈ ಮಾರ್ಗದಲ್ಲಿ ಫ್ಲೈಓವರ್‌ಗಳು ಬಂದರೂ ಸಮಸ್ಯೆ ಬಗೆಹರಿದಿರಲಿಲ್ಲ. ಆದರೆ ಈ ಮಾರ್ಗದ ಬಹುನೀರಿಕ್ಷಿತ ಡಬ್ಬಲ್ ಡೆಕ್ಕರ್ ಫ್ಲೈಓವರ್ ಮತ್ತೊಂದು ಬದಿಯ ಸಂಚಾರ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ ಮುಂದಾಗಿದ್ದು, ಶೀಘ್ರವೇ ಮುಕ್ತವಾಗಲಿದೆ.
ಕಳೆದ ವರ್ಷ ರಾಗಿಗುಡ್ಡ ಮತ್ತು ಹೆಚ್‌ಎಸ್‌ಆರ್ ಲೇಔಟ್ ಮಾರ್ಗದ ಡಬ್ಬಲ್ ಡೆಕ್ಕರ್ ಫ್ಲೈಓವರ್ ಒಂದು ಬದಿಯಲ್ಲಿ ಸಂಚಾರ ಮುಕ್ತ ಮಾಡಲಾಗಿತ್ತು. ಪರಿಣಾಮ ಈ ಮಾರ್ಗದ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಳಿ ಹೆಚ್ಚಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ಒಂದು ಹಂತಕ್ಕೆ ಕಡಿಮೆಯಾಗಿತ್ತು. ಆದರೆ ಮತ್ತೊಂದು ಬದಿ ಮಾರ್ಗದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮಾರ್ಗ ಓಪನ್ ಆಗಿರಲಿಲ್ಲ.
ಈಗಲೂ ಹೆಚ್‌ಎಸ್‌ಆರ್ ಲೇಔಟ್ ಕಡೆಯಿಂದ ರಾಗಿಗುಡ್ಡ ಮಾರ್ಗಕ್ಕೆ ಸಂಚಾರ ಮಾಡುವ ಸವಾರರು ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್ ಜಂಕ್ಷನ್ ಸೇರಿದಂತೆ ಮಾರ್ಗದ ಹಲವು ಕಡೆ ನಿತ್ಯ ಟ್ರಾಫಿಕ್ ಜಂಜಾಟದಲ್ಲೇ ಸಂಚರಿಸುವಂತಾಗಿದೆ. ಆದರೆ ಮುಂದಿನ ಜನವರಿ ಅಂತ್ಯಕ್ಕೆ ಬ್ರೇಕ್ ಹಾಕಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ಸವಾರರಿಗೆ ಗುಡ್‌ನ್ಯೂಸ್ ನೀಡಲು ತಯಾರಿ ನಡೆಸಿದೆ.
ಸದ್ಯ ಶೇ.80 ರಷ್ಟು ಸಿವಿಲ್ ಕಾಮಗಾರಿ ಮುಗಿದಿದೆ. ಎರಡು ಕಡೆ ವಯಾಡಕ್ಟ್ ಕೂರಿಸಬೇಕಿದೆ. ಇದು ಸೆಂಟ್ರಲ್ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಆಗಬೇಕಿದೆ. ಈಗಾಗಲೇ ಈ ಕಾರ್ಯಕ್ಕೂ ವೇಗ ನೀಡುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಮುಂದಾಗಿದ್ದು, ಜನವರಿ ಆರಂಭದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಅಂತ್ಯದೊಳಗೆ ಎಲ್ಲ ಟೆಸ್ಟಿಂಗ್ ಪೂರ್ಣಗೊಳಿಸಿ ಸಂಚಾರ ಮುಕ್ತ ಮಾಡುವ ತಯಾರಿಯಲ್ಲಿದೆ.
ಹಲವು ವರ್ಷಗಳಿಂದ ಟ್ರಾಫಿಕ್‌ನಿಂದ ಕಂಗೆಟ್ಟಿದ್ದ ಜನಕ್ಕೆ ಕೊನೆಗೂ ಸಮಸ್ಯೆಗೆ ಪರಿಹಾರ ಸಿಗುತ್ತಿದೆ. ನಿಗದಿ ಪಡಿಸಿದ ದಿನಾಂಕದ ಒಳಗಡೆ ಎಲ್ಲಾ ಪರೀಕ್ಷೆಗಳು ನಡೆದರೆ ಜನವರಿ ಅಂತ್ಯಕ್ಕೆ ಫ್ಲೈ ಓವರ್ ಸಂಚಾರ ಮುಕ್ತವಾಗಲಿದೆ.
