Ad image

ಬೆಳಗಾವಿಯಲ್ಲಿ ಮತ್ತೆ ಬಾಲ ಬಿಚ್ಚಿದ ಶಿವಸೇನೆ, ಕರ್ನಾಟಕದ ಬಸ್ ತಡೆದು ‘ಜೈ ಮಹಾರಾಷ್ಟ್ರ’ ಸ್ಟಿಕರ್ ಅಂಟಿಸಿದ ಪುಂಡರು!

Team SanjeMugilu
2 Min Read

ಬೆಳಗಾವಿ: ಜಿಲ್ಲೆಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಮಹಾಮೇಳಾವಕ್ಕೆ ಪೊಲೀಸ್ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅನುಮತಿ ಸಿಕ್ಕಿಲ್ಲವೆಂಬ ಕಾರಣಕ್ಕೆ ಇಂದು ಬೆಳಗ್ಗಿನಿಂದಲೇ MES ಮುಖಂಡರು ಹಾಗೂ ಕಾರ್ಯಕರ್ತರು ಗುಂಪು ಗುಂಪಾಗಿ ಜಮಾಯಿಸಿ ಪ್ರತಿಭಟನೆಗೆ ಮುಂದಾದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪೊಲೀಸರು ಹಲವು ಕಡೆ ಹಸ್ತಕ್ಷೇಪ ನಡೆಸಿ, ಈಗಾಗಲೇ 20ಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಎಂಇಎಸ್​ ಮುಖಂಡರು ವಶಕ್ಕೆ!
ವಶಕ್ಕೆ ಒಳಗಾದವರಲ್ಲಿ ಮಾಜಿ ಶಾಸಕ ಮನೋಹರ್ ಕೀಣೆಕರ್, ರಮಾಕಾಂತ ಕೊಂಡೊಸ್ಕರ್, ಪ್ರಕಾಶ ಮರಗಾಳೆ, ಮಾಲೋಜಿ ಅಷ್ಟೇಕರ್ ಹಾಗೂ ಶುಭಂ ಶಳಕೆ ಸೇರಿದಂತೆ ಪ್ರಮುಖ MES ಮುಖಂಡರು ಸೇರಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಬೆಳಗಾವಿ ಕರವೇ ಸಂಘಟನೆಯ ಮುಖಂಡ ಸುರೇಶ ಗವಣನ್ನವರ್ ಸಹ ಪೊಲೀಸರ ವಶಕ್ಕೆ ಒಳಗಾದರು. ವಿಶೇಷವೆಂದರೆ, ಅವರು MES ವಿರುದ್ದ ಪ್ರತಿಭಟಿಸಲು ಬಂದಿದ್ದಾಗಲೇ ಪೊಲೀಸ್ ಬಂಧನಕ್ಕೆ ಒಳಗಾಗಿದ್ದು, ಸ್ಥಳದಲ್ಲಿ ಕ್ಷಣಕ್ಷಣಕ್ಕೂ ವಾತಾವರಣ ಕಾವೇರಿತು.
ಪೊಲೀಸರಿಂದ ಹೇಳಿಕೆ ಏನು ಗೊತ್ತಾ!
ಅಧಿವೇಶನದ ಸಮಯದಲ್ಲಿ ಯಾವುದೇ ಗಲಭೆ ಅಥವಾ ಅರಾಜಕತೆ ನಡೆಯದಂತೆ, ಮಹಾಮೇಳಾವ್‌ಗೆ ಅನುಮತಿ ನೀಡುವುದಿಲ್ಲ. ನಿಯಮ ಉಲ್ಲಂಘಿಸಿದರೆ ತಕ್ಷಣ ಕ್ರಮ. ಈ ನಿರ್ಧಾರದಿಂದ ಎಂಇಎಸ್ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಹೋರಾಟದ ಭಾವನೆ ಮತ್ತಷ್ಟು ಬಿರುಸಾಗಿದೆ. ಈ ಹಿನ್ನಲೆಯಲ್ಲಿ ಮಹಾಮೇಳನ್ ಆಯೋಜನೆ ರದ್ದು ಪಡಿಸಲಾಗಿದೆ.
ಕೊಲ್ಹಾಪುರದಲ್ಲಿ ಕೆಎಸ್​​ಆರ್​ಟಿಸಿ ಮಹಾ ಸ್ಟಿಕ್ಕರ್
ಈ ನಡುವೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ (ಉದ್ದವ್ ಠಾಕ್ರೆ ಬಣ) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಾ ಪುಂಡಾಟಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಸಾರಿಗೆ ಬಸ್ಸುಗಳನ್ನು ತಡೆದು ‘ಜಯ್ ಮಹಾರಾಷ್ಟ್ರ’ ಎಂಬ ಸ್ಟಿಕರ್‌ಗಳನ್ನು ಅಂಟಿಸುವ ಮೂಲಕ ಆಕ್ರೋಶ ದಾಖಲಿಸಿದ ಘಟನೆಗಳು ವರದಿಯಾಗಿವೆ. ಪುಣೆಯಿಂದ ಹಲ್ಯಾಳಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿ‌ಸಿ ಬಸ್ಸೊಂದನ್ನು ಕೊಲ್ಲಾಪುರ ಬಸ್ ನಿಲ್ದಾಣದ ಬಳಿ ತಡೆದು ಸ್ಟಿಕರ್ ಅಂಟಿಸಿದ ಘಟನೆ ಉದ್ವಿಗ್ನತೆ ಹೆಚ್ಚಲು ಕಾರಣವಾಯಿತು. ಸಾರಿಗೆ ಸಿಬ್ಬಂದಿಗೆ ಭೀತಿ ಹುಟ್ಟುವಂತೆ ವರ್ತಿಸಿರುವುದಾಗಿ ದೂರುಗಳು ಬಂದಿದ್ದು, ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ.
ಅನುಮತಿ ನಿರಾಕರಣೆ ಹಿನ್ನೆಲೆ ಪ್ರತಿಭಟನೆ
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವೇ MES ಆಯೋಜಿಸಿದ್ದ ಮಹಾಮೇಳಾವಕ್ಕೆ ಕಾರಣವಾಗಿತ್ತು. ಅಧಿವೇಶನದ ವೇಳೆ ತಮ್ಮ ಬೇಡಿಕೆಗಳನ್ನು ಜೋರಾಗಿ ಮುಂದಿಡಲು MES ಮಹಾಮೇಳಾವವನ್ನು ಆಯೋಜಿಸಿತ್ತು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರಿಂದ ಮಹಾಮೇಳಾವಕ್ಕೆ ಅನುಮತಿ ನಿರಾಕರಣೆ ಮಾಡಲಾಯಿತು. ಈ ನಿರ್ಧಾರದ ವಿರುದ್ಧ MES ಗರಂಗೊಂಡಿದ್ದು, ಅವರ ಕಾರ್ಯಕರ್ತರು ರಸ್ತೆಗೆ ಇಳಿದು ಪ್ರತಿಭಟನೆಯನ್ನು ಪ್ರಾರಂಭಿಸಿದರು.
ಹೆಚ್ಚಿದ ಭದ್ರತೆ
ನಗರದಲ್ಲಿ ಜಾರಿಗೊಂಡಿರುವ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಫೋರ್ಸ್ ನಿಯೋಜಿಸಲಾಗಿದೆ. ಎರಡೂ ರಾಜ್ಯಗಳ ಗಡಿಭಾಗದ ರಾಜಕೀಯ ತೀವ್ರತೆ ಮತ್ತೊಮ್ಮೆ ಉದ್ಭವಿಸಿರುವುದರಿಂದ ಪರಿಸ್ಥಿತಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬ ಪ್ರಶ್ನೆ ನಾಗರಿಕರಲ್ಲಿ ಆತಂಕ ಮೂಡಿಸಿದೆ. ನಿಪ್ಪಾಣಿ, ಶಿನ್ನೋಳಿ ಸೇರಿದಂತೆ ಮಹಾರಾಷ್ಟ್ರ ಗಡಿಯ ಪ್ರಮುಖ ಮಾರ್ಗಗಳಲ್ಲಿ ಗಟ್ಟಿಯಾದ ತಪಾಸಣೆ ನಡೆಯುತ್ತಿದೆ. ಶಿವಸೇನೆ ಮುಖಂಡರು ಬೆಳಗಾವಿ ಪ್ರವೇಶಿಸಿ ಗಲಭೆ ಸೃಷ್ಟಿಸಬಾರದು ಎಂಬ ಉದ್ದೇಶದಿಂದ, ಕೆಲವು ಹೆಸರುಪಟ್ಟ ನಾಯಕರಿಗೆ *ಗಡಿ ಪ್ರವೇಶ ನಿರ್ಬಂಧ ಹೇರಲು ಕ್ರಮ ಕೈಗೊಳ್ಳಲಾಗಿದೆ. ಶಿವಸೇನೆ ಮುಖಂಡರು ಅಥವಾ ಹೊರಗಿನಿಂದ ಬರುವ ಗುಂಪುಗಳು ನಗರಕ್ಕೆ ಪ್ರವೇಶಿಸಿ ಉದ್ವಿಗ್ನತೆ ಹೆಚ್ಚಿಸುವ ಯಾವುದೇ ಚಟುವಟಿಕೆ ಮಾಡಲು ಅವಕಾಶ ನೀಡುವುದಿಲ್ಲ ಎಂಬುದಾಗಿ ಪೊಲೀಸ್​ರು ಕಡ್ಡಿ ತುಂಡರಿಸಿದ ಹಾಗೆ ಹೇಳದ್ದಾರೆ.

Share This Article