ಹುಬ್ಬಳ್ಳಿ: “ಮಹಿಳೆಯರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವವೇ ಇಲ್ಲ. ಯಾವಾಗಲೂ ‘ಅವಳಿವಳು’ ಎಂದು ಸಂಬೋಧಿಸುವುದು ಮಹಿಳಾ ಸಮುದಾಯಕ್ಕೆ ಮಾಡುತ್ತಿರುವ ನೇರ ಅವಮಾನ” ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತೀವ್ರ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಏಕವಚನದಲ್ಲಿ ಕರೆದಿರುವ ಬಗ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಮಹಿಳೆಯರ ಬಗ್ಗೆ ತೋರುವ ಅಗೌರವದ ಪರಮಾವಧಿ. ಕರ್ನಾಟಕದಿಂದ ಆಯ್ಕೆಯಾದ ಸಂಸದೆ, ಕೇಂದ್ರ ಹಣಕಾಸು ಸಚಿವೆ ಬಗ್ಗೆ ಹೀಗೆ ಮಾತನಾಡುವುದು ಅವರ ಹುದ್ದೆಗೆ ತಕ್ಕ ವರ್ತನೆ ಅಲ್ಲ” ಎಂದು ಜೋಶಿ ಜವಾಬ್ದಾರಿ ಪ್ರಶ್ನಿಸಿದ್ದಾರೆ.
ಮತ್ತಷ್ಟು ಕಿಡಿಕಾರಿದ ಅವರು, “ತಪ್ಪು ಮಾಡಿದಾಗಲೆಲ್ಲಾ ಸಿಎಂ ‘ನನ್ನದು ಗ್ರಾಮೀಣ ಭಾಷೆ’ ಎಂದು ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಅವರನ್ನೂ ಇದೇ ರೀತಿ ಏಕವಚನದಲ್ಲಿ ಕರೆಯುವರಾ?” ಎಂದು ಪ್ರಶ್ನಿಸಿದ್ದಾರೆ.
ಅವರು ಮುಂದೆ ಹೇಳುವಾಗ, “ಇದು ಸಭ್ಯತೆಯಲ್ಲ, ಸಂಸ್ಕೃತಿಯಲ್ಲ. ಪ್ರಮುಖ ಮಹಿಳೆಯರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸಂಪೂರ್ಣ ಖಂಡನೀಯ. ಸಿಎಂ ಸಿದ್ದರಾಮಯ್ಯ ಅವರ ಭಾಷಣದಲ್ಲಿ ಮನುವಾದದ ಸುಳಿವು ಗೋಚರಿಸುತ್ತದೆ” ಎಂದು ಜೋಶಿ ಆರೋಪಿಸಿದರು.
ಇದಕ್ಕೂ ಮುನ್ನ ರಾಷ್ಟ್ರಪತಿ ಕುರಿತು ಮಾತನಾಡುವ ಸಂದರ್ಭದಲ್ಲೂ ಇದೇ ಧಾಟಿ ತೋರಿದ್ದರು ಎಂದು ಜೋಶಿ ಸ್ಮರಿಸಿದರು. “ಸದಸ್ಯ, ನಾಯಕರ ಬಗ್ಗೆ ಗೌರವ, ಸೌಜನ್ಯ ಮರೆತು ಮಾತನಾಡುತ್ತಿರುವ ಸಿಎಂಗೆ ಕಾಂಗ್ರೆಸ್ ಅಧ್ಯಕ್ಷರು ಸ್ವಲ್ಪ ತಿಳಿವಳಿಕೆ ಹೇಳುವ ಕಾಲ ಬಂದಿದೆ” ಎಂದು ಅವರು ವಾಗ್ದಾಳಿ ನಡೆಸಿದರು.
