Ad image

ಕುರ್ಚಿ ಕದನದ ನಡುವೆ ಸಿದ್ದರಾಮಯ್ಯಗೆ ಬಿಗ್​​ ಶಾಕ್​​: ಸುಪ್ರೀಂಕೋರ್ಟ್​ನಿಂದ​​ ನೋಟಿಸ್​​

Team SanjeMugilu
1 Min Read

ದೆಹಲಿ: ಚುನಾವಣಾ ಅಕ್ರಮ ಆರೋಪ ಸಂಬಂಧ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್​ ನೋಟಿಸ್​​ ನೀಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಗೆಲುವನ್ನು ಪ್ರಶ್ನಿಸಿ ಕೆ. ಶಂಕರ್ ಎನ್ನುವರು ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ವಿಚಾರಣೆ ನಡೆಸಿರುವ ನ್ಯಾ. ವಿಕ್ರಮನಾಥ್ ನೇತೃತ್ವದ ದ್ವಿ ಸದಸ್ಯ ಪೀಠ​​, ಸಿದ್ದರಾಮಯ್ಯ ಮತ್ತು ಚುನಾವಣಾ ಆಯೋಗಕ್ಕೆ ನೊಟೀಸ್​​ ಜಾರಿ ಮಾಡಿದೆ.

ಪ್ರಕರಣ ಏನು?
2023ರ ಚುನಾವಣೆಯಲ್ಲಿ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಆಮಿಷಗಳ ಮೂಲಕ ಮತದಾರರನ್ನು ತಮ್ಮೆಡೆಗೆ ಸೆಳೆಯುವುದು ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಸಿದ್ದರಾಮಯ್ಯನರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಮೈಸೂರಿನ ವರುಣ ಹೋಬಳಿಯ ಕೂಡನಹಳ್ಳಿ ಗ್ರಾಮದ ಕೆ.ಎಂ. ಶಂಕರ್‌ ಆಗ್ರಹಿಸಿದ್ದರು. ಇದೇ ವಿಚಾರವಾಗಿ ಹೈಕೋರ್ಟ್​​ ಮೆಟ್ಟಿಲು ಕೂಡ ಏರಿದ್ದರು.

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 123 (1) ಮತ್ತು ಸೆಕ್ಷನ್‌ 123 (2) ಪ್ರಕಾರ, ಚುನಾವಣಾ ಪ್ರಚಾರ ವೇಳೆ ಗ್ಯಾರಂಟಿಗಳನ್ನು ಘೋಷಿಸುವುದು ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಇದು ಆಮಿಷವಾಗಿದ್ದು, ಈ ರೀತಿ ಪ್ರಚಾರ ಮಾಡುವುದು ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 123 (4)ರ ಪ್ರಕಾರವೂ ಒಪ್ಪತಕ್ಕದ್ದಲ್ಲ. ಜೊತೆಗೆ ಕಾಂಗ್ರೆಸ್​​ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯನವರಿಗೆ ಗೊತ್ತಿತ್ತು. ಗ್ಯಾರಂಟಿ ಕಾರ್ಡಿನ ಮೇಲೆ ಸ್ವತಃ ಅವರೇ ಸಹಿ ಮಾಡಿದ್ದಾರೆ. ಹೀಗಾಗಿ ಮತದಾರರಿಗೆ ಆಮಿಷ ನೀಡಿ ತಮಗೆ ಮತ ಚಲಾಯಿಸುವಂತೆ ನೋಡಿಕೊಳ್ಳಲಾಗಿದೆ ಎಂದು ಕೆ.ಎಂ. ಶಂಕರ್‌ ಹೇಳಿದ್ದರು.

ಆದರೆ ಸಿದ್ದರಾಮಯ್ಯ ಅವರ ಪರವಾಗಿ ವಾದಿಸಿಸದ್ದ ಹಿರಿಯ ವಕೀಲ ರವಿವರ್ಮ ಕುಮಾರ್, ಶಂಕರ್​​ ಅವರ ಆರೋಪಗಳಿಗೆ ಕೌಂಟರ್​​ ಕೊಟ್ಟಿದ್ದರು. ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳಿಂದ ಆಶ್ವಾಸನೆಗಳನ್ನು ನೀಡುವುದಕ್ಕೆ ಅವಕಾಶವಿದೆ ಎಂದು ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್​​ ಶಂಕರ್​​ ಅವರ ಅರ್ಜಿ ವಜಾಗೊಳಿಸಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು.

Share This Article