ಬೆಳಗಾವಿ, ಡಿಸೆಂಬರ್ 8: ಡಿಸಿಎಂ ಡಿಕೆ ಶಿವಕುಮಾರ್ ಅವರು ಅವಕಾಶ ಕೊಡಿ ಎಂದು ಕೇಳಿದ್ದರು. ಆದರೆ, ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ ಎಂದು ಪಕ್ಷದ ಹೈಕಮಾಂಡ್ ಹೇಳಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ, ಕಾಂಗ್ರೆಸ್ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್ನನಲ್ಲಿ ಅಧಿಕಾರಕ್ಕಾಗಿ ಯಾವುದೇ ಕಿತ್ತಾಟ ನಡೆದಿಲ್ಲ. ಇದೆಲ್ಲ ಪ್ರತಿಪಕ್ಷದವರ ಸೃಷ್ಟಿ ಎಂದರು.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ ಎಂದು ಹೈಕಮಾಂಡ್ ಹೇಳಿದೆ. ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ. ಆ ರೀತಿಯ ವದಂತಿಯನ್ನು ಪ್ರತಿಪಕ್ಷದವರು ಹುಟ್ಟು ಹಾಕಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ಬದಲಾಗುತ್ತಾರೆಂದು ಹೇಳುತ್ತಿದ್ದಾರೆ. ಆದರೆ, ಸಿಎಂ ಬದಲಾಗುತ್ತಾರೆ ಎಂಬ ಕನಸು ಕಾಣಬೇಕಷ್ಟೇ ಎಂದು ಯತೀಂದ್ರ ಹೇಳಿದ್ದಾರೆ.
ಸಿದ್ದರಾಮಯ್ಯ 5 ವರ್ಷ ಸಿಎಂ: ಯತೀಂದ್ರ ವಿಶ್ವಾಸ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸುತ್ತಾರೆ ಎಂಬ ನಂಬಿಕೆ ವೈಯಕ್ತಿಕವಾಗಿ ನನಗಿದೆ. ದೆಹಲಿಯಲ್ಲಿಯೂ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸಿಎಂ ಸಿದ್ದರಾಮಯ್ಯರನ್ನು ಹೈಕಮಾಂಡ್ ನಾಯಕರು ಕರೆದಿಲ್ಲ ಎಂದು ಯತೀಂದ್ರ ಸ್ಪಷ್ಟಪಡಿಸಿದ್ದಾರೆ.
ಕುತೂಹಲ ಮೂಡಿಸಿದ ಯತೀಂದ್ರ ಹೇಳಿಕೆ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾದ ಬೆನ್ನಲ್ಲೇ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಎರಡೆರಡು ‘ಬ್ರೇಕ್ಫಾಸ್ಟ್ ಮೀಟಿಂಗ್’ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದರು. ಅದಾದ ನಂತರ, ನಾಯಕತ್ವ ಬದಲಾವಣೆ ವಿಚಾರ ಏನಿದ್ದರೂ ಹೈಕಮಾಂಡ್ಗೆ ಬಿಟ್ಟಿದ್ದೇವೆ ಎಂದಿದ್ದರು. ಇಷ್ಟಾದ ನಂತರ ಇದೀಗ, ಸಿದ್ದರಾಮಯ್ಯ 5 ವರ್ಷ ಮುಂದುವರಿಯಲಿದ್ದಾರೆ ಎಂದು ಯತೀಂದ್ರ ಬಹಿರಂಗ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದೆಡೆ, ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರವಾಗಿ ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನಿವಾಸದಲ್ಲಿ ಹೈಕಮಾಂಡ್ ನಾಯಕರು ಮಾತುಕತೆ ನಡೆಸಿದ್ದರು. ಸಭೆಯಲ್ಲಿ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಇದ್ದರು. ಇದಾದ ನಂತರ ಮತ್ತೊಂದು ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿದ್ದವು. ಅಷ್ಟಾದರೂ, ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡದೇ ಇಲ್ಲ ಎಂದು ಯತೀಂದ್ರ ಹೇಳಿದ್ದಾರೆ.
