Ad image

ಡಾ.ಪರಮೇಶ್ವರ್ ಮುಖ್ಯಮಂತ್ರಿ ಮಾಡಿ: ಸಿದ್ದರಾಮಯ್ಯ

Team SanjeMugilu
2 Min Read

ಬೆಂಗಳೂರು:ಅಧಿಕಾರ ಹಸ್ತಾಂತರಕ್ಕೆ ಸಮ್ಮತಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮಿಂದ ತೆರವಾಗುವ ಸ್ಥಾನಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ತನ್ನಿ ಎಂದು ಎಐಸಿಸಿ ವರಿಷ್ಠರಿಗೆ ಶಿಫಾರಸು ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಧಾವಿಸಿದ್ದ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗಾಪಾಲ್ ಅವರಿಗೆ ತಮ್ಮ ನಿಲುವನ್ನು ತಿಳಿಸಿದ್ದಾರೆ.

ವೇಣುಗೋಪಾಲ್‌ಗೆ ಶಿಫಾರಸು
ಡಾ.ಪರಮೇಶ್ವರ್ ಸೇರಿದಂತೆ ತಮ್ಮ ಬೆಂಬಲಿತ ಸಚಿವರ ಜೊತೆಗೂಡಿ ಮಂಗಳೂರು ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ವೇಣುಗೋಪಾಲ್ ಭೇಟಿ ಮಾಡಿದ ಮುಖ್ಯಮಂತ್ರಿ, ವರಿಷ್ಠರು ತೆಗೆದುಕೊಳ್ಳುವ ತೀರ್ಮಾನದಂತೆ ಅಧಿಕಾರ ಹಸ್ತಾಂತರ ಮಾಡುತ್ತೇನೆ.

ನನ್ನಿಂದ ತೆರವಾಗುವ ಸ್ಥಾನಕ್ಕೆ ದಲಿತ ಸಮುದಾಯಕ್ಕೆ ಸೇರಿದ ಡಾ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ, ಇದರಿಂದ ಕಾಂಗ್ರೆಸ್‌ಗೆ ರಾಷ್ಟ್ರದಲ್ಲಿ ಬಲ ಬರುತ್ತದೆ, ಜೊತೆಗೆ ನಾವು ಸಂದೇಶ ನೀಡಿದಂತಾಗುತ್ತದೆ. ಹೊಸ ನಾಯಕನ ಆಯ್ಕೆ ಸಂದರ್ಭದಲ್ಲಿ ಕರೆಯಲಾಗುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಾ.ಪರಮೇಶ್ವರ್ ಹೆಸರನ್ನು ನಾನೇ ಅನುಮೋದಿಸುತ್ತೇನೆ ಎಂದಿದ್ದಾರೆ.

ರಾಜಕೀಯ ಪರಿಣಾಮ
ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಉಂಟಾಗಬಹುದಾದ ರಾಜಕೀಯ ಪರಿಣಾಮಗಳನ್ನೂ ವೇಣುಗೋಪಾಲ್ ಗಮನಕ್ಕೆ ತಂದಿದ್ದಾರೆ. ಪಕ್ಷ ಮತ್ತು ಸರ್ಕಾರವನ್ನು ಮತ್ತಷ್ಟು ಗಟ್ಟಿ ಮಾಡಲು ಈ ಬಾರಿ ದಲಿತ ಸಮುದಾಯಕ್ಕೆ ಅವಕಾಶ ಮಾಡಿಕೊಡಿ, ಕರ್ನಾಟಕ ಆಡಳಿತದಲ್ಲಿ ಮೊದಲಿನಿಂದಲೂ ಈ ಸಮಾಜದ ನಾಯಕರಿಗೆ ಅವಕಾಶ ಸಿಕ್ಕಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಮಾತಿಗೆ ಸಭೆಯಲ್ಲೇ ಇದ್ದ ಸಚಿವರಾದ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್ ಸೇರಿದಂತೆ ಇತರರು ಧ್ವನಿಗೂಡಿಸಿದರು.

ಅಭಿಪ್ರಾಯ ವರಿಷ್ಠರ ಗಮನಕ್ಕೆ
ಸಿದ್ದರಾಮಯ್ಯ ಮಾತುಗಳನ್ನು ಆಲಿಸಿದ ವೇಣುಗೋಪಾಲ್ ನಿಮ್ಮೆಲ್ಲಾ ಅಭಿಪ್ರಾಯಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದಿಡುತ್ತೇನೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಬಹುತೇಕ ಡಿಸೆಂಬರ್ 6ರಂದು ಸಭೆ ಕರೆದು ಚರ್ಚಿಸಲಿದ್ದು, ಅಂದು ಎಲ್ಲರ ಗಮನಕ್ಕೆ ತರುವೆ ಎಂಬ ಆಶ್ವಾಸನೆ ನೀಡಿದ್ದರು.

ಡಾ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಗಾದಿಗೆ ತರಲು ಸಿದ್ದರಾಮಯ್ಯ ಹೊರಟಿರುವ ಬೆನ್ನಲ್ಲೇ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಬೆಳಗಾವಿಯ ವಿಧಾನಮಂಡಲ ಅಧಿವೇಶನ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಂದೆ ಐದು ವರ್ಷ ಅಧಿಕಾರದಲ್ಲಿ ಇರುತ್ತಾರೆ ಎಂದಿದ್ದಾರೆ.

ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ
ತಮಗೆ ಅಧಿಕಾರ ಹಸ್ತಾಂತರಿಸಿ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಳಿದ್ದು ನಿಜ, ಆದರೆ, ನಾಯಕತ್ವ ಬದಲಾವಣೆ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಯಾವುದೇ ಕಿತ್ತಾಟ ನಡೆದಿಲ್ಲ, ಇದೆಲ್ಲ ಪ್ರತಿಪಕ್ಷದವರ ಸೃಷ್ಟಿ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ ಎಂಬುದಾಗಿ ಹೈಕಮಾಂಡ್ ಹೇಳಿದೆ, ಇದು ಮುಗಿದ ಅಧ್ಯಾಯ ಎಂದರು. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮುಖ್ಯಮಂತ್ರಿ ಬದಲಾಗುತ್ತಾರೆಂದು ಹೇಳುತ್ತಿದ್ದಾರೆ, ಆದರೆ, ಅದು ಕನಸು.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ದೆಹಲಿಯ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಬೆಂಗಳೂರಿನಲ್ಲೂ ಚರ್ಚೆ ನಡೆದಿಲ್ಲ, ಸಿದ್ದರಾಮಯ್ಯ ಅವರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ನಾಯಕರು ಕರೆದಿಲ್ಲ, ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.

Share This Article