ಬೆಂಗಳೂರು: ಬೆಳಗಾವಿಯ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಮದ್ಯಪಾನಿಗಳ ಸಂಖ್ಯೆ ಹೆಚ್ಚಳದ ವಿಚಾರ ರಾಜಕೀಯ ತಾಪಮಾನ ಹೆಚ್ಚಿಸಿದೆ. ಕುಡುಕರ ವಿಷಯ ಜನರ ಸಮಸ್ಯೆಗೂ ಸೇರದ ವಿಷಯ ಎಂಬ ಅಭಿಪ್ರಾಯ ಬಂದರೂ, ಸದನದಲ್ಲಿ ಇದುವರೆಗೂ ಕಾಣದ ಮಟ್ಟದ ಚರ್ಚೆ ಮತ್ತು ಆರೋಪ–ಪ್ರತ್ಯಾರೋಪಗಳು ಜೋರಾಗಿ ಕೇಳಿಬಂದುವು.
ವಿಪಕ್ಷ ನಾಯಕ ಆರ್. ಅಶೋಕ್ ಮದ್ಯದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಕಿಡಿಕಾರಿದರು. “ಸಿಎಂ ಬಾಡಿ ಲ್ಯಾಂಗ್ವೇಜ್ ಬದಲಾಗಿದೆ. ಜನರು ಏನು ಕೇಳಿದರೂ ಎರಡು ಸಾವಿರ ಕೊಡ್ತೀನಿ ಅನ್ನೋ ಉತ್ತರ. ಆದರೆ ಆ ಹಣ ಎಲ್ಲಿಂದ ಬರುತ್ತದೆ? ಗಂಡನ ಜೇಬಿನಿಂದ! ಮದ್ಯಕ್ಕೆ ತೆರಿಗೆ ಹಾಕಿ ಮಹಿಳೆಯರಿಗೆ ಕೊಡ್ತಿದ್ದೀರಿ,” ಎಂದು ಅವರು ತರಾಟೆಗೆ ತೆಗೆದುಕೊಂಡರು. ಒಂದು ಕ್ವಾಟರ್‌ಗೆ 50–60 ರೂ. ತೆರಿಗೆ ಹೆಚ್ಚಿಸಿರುವುದು ಜನರ ಜೇಬಿಗೆ ಹೊರೆ ಎಂದು ಅವರು ಆರೋಪಿಸಿದರು.
ಇದಕ್ಕೆ ಪ್ರತಿಯಾಗಿ ಎಚ್.ಕೆ. ಪಾಟೀಲ್ ಉತ್ತರಿಸಿ, ತೆರಿಗೆ ಆದಾಯ ಬಡತನ ನಿವಾರಣೆಗೆ ಬಳಸಲಾಗುತ್ತಿದೆ ಎಂದು ಹೇಳಿದರು. “ಉತ್ತರ ಕರ್ನಾಟಕ ಜನರು ಮಾತ್ರ ಕುಡಿಯುತ್ತಾರೆ ಎಂಬ ಸೂಚನೆ ತಪ್ಪು. ಗೃಹಲಕ್ಷ್ಮಿ ಹಣ ಮದ್ಯಕ್ಕೆ ಖರ್ಚಾಗುವುದಿಲ್ಲ,” ಎಂದು ಅವರು ಸ್ಪಷ್ಟನೆ ನೀಡಿದರು.
ಚರ್ಚೆಯ ತೀವ್ರತೆ ಇನ್ನಷ್ಟು ಏರಲು ಕಾರಣರಾದವರು ಬಸವರಾಜ ರಾಯರೆಡ್ಡಿ. “ಬೆಂಗಳೂರು ನಗರದಲ್ಲಿ ಕುಡಿಯುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದೆ. ಅಶೋಕ್ ಅವರ ಕ್ಷೇತ್ರದಲ್ಲಿಯೇ ಮದ್ಯಪಾನಿಗಳ ಸಂಖ್ಯೆ 1.6% ಹೆಚ್ಚಾಗಿದೆ,” ಎಂದು ಅವರು ಅಂಕಿಅಂಶ ಹಂಚಿಕೊಂಡರು.
ಈ ಹೇಳಿಕೆಗೆ ತಕ್ಷಣ ಶಿವಲಿಂಗೇಗೌಡ ಪ್ರತಿಕ್ರಿಯಿಸಿ, “ಯಾವ ಸರ್ಕಾರದ ಕಾಲದಲ್ಲೂ ಜನರು ಕುಡಿದಿದ್ದಾರೆ. ಇದಕ್ಕೆ ರಾಜಕೀಯ ಬಣ್ಣ ಕೊಡುವುದು ಸರಿಯಲ್ಲ,” ಎಂದರು.
ಮದ್ಯಪಾನ, ತೆರಿಗೆ ನೀತಿ, ಬಡತನ ನಿವಾರಣೆ, ಗೃಹಲಕ್ಷ್ಮಿ ಯೋಜನೆ—ಈ ಎಲ್ಲವುಗಳು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದಂತೆ ಆಗಿ, ಸದನದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಯಾವ ಸರ್ಕಾರದ ಅವಧಿಯಲ್ಲಿ ಕುಡಿಯುವವರ ಸಂಖ್ಯೆ ಹೆಚ್ಚಾಯಿತು ಎಂಬ ಪ್ರಶ್ನೆಯು ದೀರ್ಘ ರಾಜಕೀಯ ಚರ್ಚೆಗೆ ದಾರಿ ಮಾಡಿಕೊಟ್ಟಿತು.
