ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಇಂದು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಲ್ಲಿನ ವಿಳಂಬದ ಬಗ್ಗೆ ತೀವ್ರ ಗದ್ದಲ ಎದ್ದಿತ್ತು. ಮಹಿಳಾ-ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಇಂದು ವಿಪಕ್ಷ ನಾಯಕರು ತೀವ್ರ ವಾಗ್ದಾಳಿ ನಡೆಸಿದರು. ಫೆಬ್ರವರಿ-ಮಾರ್ಚ್ ತಿಂಗಳ ಹಣ ಬಿಡುಗಡೆಯಾಗಿಲ್ಲ ಎಂದು ವಾದ ಮಾಡಿದರು. ಈ ಫೆಬ್ರವರಿ-ಮಾರ್ಚ್ ತಿಂಗಳ ಹಣ ಬಿಡುಗಡೆಯಾಗಿಲ್ಲ ಎಂಬ ಪ್ರಶ್ನೆಗೆ ಹೆಬ್ಬಾಳ್ಕರ್ ಸ್ಪಷ್ಟ ಉತ್ತರ ನೀಡದೇ ತತ್ತರಿಸಿದ್ದು, ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ.
ಗೃಹಲಕ್ಷ್ಮಿ ವಿಳಂಬದ ಬಗ್ಗೆ ಸ್ಪಷ್ಟ ಉತ್ತರ ನೀಡದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಆಗ ಸ್ವತಃ ಸಿಎಂ ಸಿದ್ದರಾಮಯ್ಯ ಮೈಕ್ ಹಿಡಿದು ಸಚಿವೆಯ ಬೆಂಬಲಕ್ಕೆ ನಿಂತು ವಿರೋಧಪಕ್ಷ ನಾಯಕ ಆರ್. ಅಶೋಕ್ ಗೆ ತೀಕ್ಷ್ಣ ತಿರುಗೇಟು ನೀಡಿದರು.
ಸದನದಲ್ಲಿ ಗೃಹಲಕ್ಷ್ಮೀ ಬಗ್ಗೆ ಭಾರೀ ಚರ್ಚೆ!
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಭಾರೀ ಚರ್ಚೆ ನಡೀತು. ಅದರಲ್ಲೂ ಗೃಹಲಕ್ಷ್ಮಿ ಹಣ ವಿಳಂಬದ ಬಗ್ಗೆ ವಿರೋಧ ಪಕ್ಷದವರು ಸಿಡಿದೆದ್ದಿದ್ದು, ಸ್ಪಷ್ಟ ಉತ್ತರ ನೀಡದೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತತ್ತರಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಜೊತೆಗೆ ಗೃಹ ಲಕ್ಷ್ಮೀ ಫಲಾನುಭವಿಗಳಿಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ವಿಪಕ್ಷಗಳ ಪ್ರಶ್ನೆಗೆ ಸಚಿವೆ ತತ್ತರ, ಸ್ಪಷ್ಟ ಉತ್ತರ ಇಲ್ಲ!
ಶಾಸಕ ಮಹೇಶ್ ಟೆಂಗಿನಕಾಯಿ ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ-ಮಾರ್ಚ್ ತಿಂಗಳ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಸ್ಪಷ್ಟನೆ ಕೇಳಿದ್ದಾರೆ. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾನು ಎಲ್ಲವನ್ನೂ ಹೇಳಿದ್ದೇನೆ ಎಂದು ಮಾತ್ರ ಉತ್ತರಿಸಿದ್ದಾರೆ. ಯಾವ ತಿಂಗಳವರೆಗೆ ಹಣ ಬಿಡುಗಡೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಿಲ್ಲ. ಇದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ಶಾಸಕ ಸುನೀಲ್ ಕುಮಾರ್ ಸಚಿವರು ಸದನದ ಹಕ್ಕುಚ್ಯುತಿ ಮಾಡಿದ್ದಾರೆ, ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷಗಳ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತತ್ತರಿಸಿದ್ದನ್ನು ಕಂಡ ಸಿಎಂ ಸಿದ್ದರಾಮಯ್ಯ ಮೈಕ್ ಹಿಡಿದು ಉತ್ತರಿಸಿದ್ದಾರೆ. ಆಗಸ್ಟ್ ತನಕ ಹಣ ಬಿಡುಗಡೆ ಮಾಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಒಂದು ವೇಳೆ ಮಾರ್ಚ್ ತಿಂಗಳ ಹಣ ಬಂದಿಲ್ಲ ಅಂದರೆ ಮಾಡಿಸೋಣ. ಸಾಮಾನ್ಯವಾಗಿ ಎರಡು ತಿಂಗಳು ವಿಳಂಬವಾಗುತ್ತದೆ. ಬಂದಿಲ್ಲ ಅಂದರೆ ಕೂಡಲೇ ಕೊಡಿಸುವ ಕೆಲಸ ಮಾಡೋಣ. ಈಗಾಗಲೇ ಸೆಪ್ಟೆಂಬರ್ ವರೆಗೂ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಆ ನಂತರ ಆರ್. ಅಶೋಕ್ ಅವರನ್ನು ಗುರಿಯಾಗಿಸಿ ಸಿಎಂ ತಿರುಗೇಟು ನೀಡಿದರು. ನೀನೇ ಹೇಳಿದ್ಯಲ್ಲಪ್ಪ, ವಿರೋಧ ಪಕ್ಷದವರು ಇರೋದೇ ಸುಳ್ಳು ಹೇಳೋದಕ್ಕೆ ಅಂತ. ಹೀಗಾಗಿ ನೀವೇ ಸುಳ್ಳು ಹೇಳ್ತಿದ್ದೀರಿ ಎಂದಿದ್ದಾರೆ. ಈ ವೇಳೆ ಅಶೋಕ್, ವಿರೋಧ ಪಕ್ಷದವರು ಇರೋದು ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸೋದಕ್ಕೆ, ಸುಳ್ಳು ಹೇಳೋದಕ್ಕಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನೂ ಮುಂದುವರೆದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಸಚಿವರು ಸದನದ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಆಕ್ರೋಶಿಸಿದಾಗ, ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ನೀವು ಗ್ಯಾರಂಟಿ ಯೋಜನೆಗಳನ್ನೇ ವಿರೋಧಿಸ್ತಿದ್ದೀರಲ್ಲ ಎಂದು ಕೌಂಟರ್ ಕೊಟ್ಟರು.
ಏನಾಗಿದೆ ಗೃಹಲಕ್ಷ್ಮಿ ಯೋಜನೆಯ ಸ್ಥಿತಿ?
ಸದ್ಯ ಆಗಸ್ಟ್ 2025ರವರೆಗೆ ಗೃಹಲಕ್ಷ್ಮೀ ಹಣ ಬಿಡುಗಡೆಯಾಗಿದೆ ಎಂದು ಸಚಿವೆ ಹೇಳಿಕೆ ನೀಡಿದ್ದಾರೆ. ಆದರೆ ಫೆಬ್ರವರಿ-ಮಾರ್ಚ್ 2025ರ ಹಣ ಇನ್ನೂ ಬಿಡುಗೆಡೆಯಾಗಿಲ್ಲ ಎಂಬ ದೂರುಗಳಿವೆ. ಹೀಗಾಗು ಸಿಎಂ ಸಿದ್ದರಾಮಯ್ಯ ಸ್ವತಃ ವಿಳಂಬವಾದರೆ ಕೂಡಲೇ ಬಿಡುಗಡೆ ಮಾಡಿಸುತ್ತೇವೆ, ಫೆಬ್ರವರಿ-ಮಾರ್ಚ್ ಹಣ ಬಂದಿಲ್ಲ ಅಂದರೆ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟ ಉತ್ತರ ನೀಡದೇ ತತ್ತರಿಸಿದ್ದು, ಪ್ರತಿಪಕ್ಷಗಳಿಗೆ ದಾಳಿ ಮಾಡಲು ಅವಕಾಶ ಕೊಟ್ಟಿತ್ತು. ಸಿಎಂ ಸಿದ್ದರಾಮಯ್ಯ ಸ್ವತಃ ಎದ್ದು ಸಚಿವೆಯನ್ನು ರಕ್ಷಿಸಿ, ವಿರೋಧಪಕ್ಷಗಳಿಗೆ ತಿರುಗೇಟು ನೀಡಿದ್ದು, ತಮ್ಮ ಬಣದಲ್ಲಿ ಗಟ್ಟಿತನ ತೋರಿಸಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗಳಲ್ಲಿ ವಿಳಂಬದ ಬಗ್ಗೆ ಜನರಲ್ಲಿ ಆಕ್ರೋಶ ಇರುವುದರಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ವಿಳಂಬದ ಪ್ರಶ್ನೆಯೇ ಇಂದು ಮುಖ್ಯ ಚರ್ಚೆಯಾಗಿ ಮಾರ್ಪಟ್ಟಿತು. ಸಿಎಂ ಅವರ ತಿರುಗೇಟು ಮತ್ತು ಸಚಿವೆಯ ಸ್ಪಷ್ಟತೆಯ ಕೊರತೆಯಿಂದ ಸದನದಲ್ಲಿ ನಗೆ-ಆಕ್ರೋಶ ಮಿಶ್ರಿತ ವಾತಾವರಣ ನಿರ್ಮಾಣವಾಯಿತು.
ಗೃಹಲಕ್ಷ್ಮೀಯರಿಗೆ ಸದನದಲ್ಲೇ ಗುಡ್ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ!
