ಬೆಂಗಳೂರು: ಕಾಲ ಎಷ್ಟೇ ಮುಂದುವರೆದರೂ ಹೆಣ್ಣು ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಯಾವ ಸುಧಾರಣೆಯೂ ಕಂಡಂತಿಲ್ಲ. ಕತ್ತಲಾದರೆ ಸಾಕು ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವ ಮಹಿಳೆಗೆ ಭಯದಿಂದ ಬೆವರಿಳಿಯುತ್ತದೆ. ಬೆಂಗಳೂರಿನಲ್ಲಂತೂ ಹೆಣ್ಣು ಮಕ್ಕಳು ಒಂಟಿಯಾಗಿ ಓಡಾಡುವುದು ಕನಸೇ ಎಂಬಷ್ಟರಮಟ್ಟಿಗೆ ಸುರಕ್ಷತೆ ಹದಗೆಟ್ಟಿದೆ. ಹೀಗಿರುವಾಗ ಮಹಿಳೆಯರ ಸುರಕ್ಷತೆಗೆ ಧಕ್ಕೆ ಉಂಟುಮಾಡುತ್ತಿದ್ದ ವಿಚಿತ್ರ ಸೈಕೋಪಾತ್‌ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರ ಖಾಸಗಿ ಅಂಗಗಳನ್ನು ಮುಟ್ಟಿ ವಿಕೃತಿ
ಆರೋಪಿ ವಿನೋದ್, ಕಳೆದ ಒಂದು ತಿಂಗಳಿಂದ ಸಂಜೆ 6 ಗಂಟೆಯ ಬಳಿಕ ಒಂಟಿಯಾಗಿ ಸಂಚರಿಸುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಒಬ್ಬಂಟಿಯಾಗಿ ನಡೆದುಕೊಂಡು ಬರುವವರನ್ನಷ್ಟೇ ಅಲ್ಲದೇ ಬೈಕ್‌ನಲ್ಲಿ ಬರುವ ಹೆಣ್ಣು ಮಕ್ಕಳನ್ನೂ ಈತ ಬಿಡುತ್ತಿರಲಿಲ್ಲ. ಒಂಟಿ ಮಹಿಳೆಯರ ಹತ್ತಿರ ಹೋಗಿ ತಬ್ಬಿಕೊಳ್ಳುತ್ತಿದ್ದ ಆರೋಪಿ, ರಸ್ತೆಗುಂಡಿ ಬಳಿ ಮಹಿಳೆಯರು ಗಾಡಿಯನ್ನು ನಿಧಾನಿಸಿದಾಗಲೂ ಹೋಗಿ ತಬ್ಬಿಕೊಂಡು ಅಸಭದ್ಯವಾಗಿ ವರ್ತಿಸುತ್ತಿದ್ದ. ಅಷ್ಟಕ್ಕೆ ಸಮ್ಮನಾಗದ ಸೈಕೋ ವಿನೋದ್, ಮಹಿಳೆಯರ ಖಾಸಗಿ ಅಂಗಗಳನ್ನು ಮುಟ್ಟಿ ವಿಕೃತಿ ಮೆರೆಯುತ್ತಿದ್ದ. ತಿಂಗಳಾನುಗಟ್ಟಲೆ ಈತನ ಕಾಮುಕತೆಗೆ ಬ್ರೇಕ್ ಬಿದ್ದಿರಲಿಲ್ಲ.
ಡಿಸೆಂಬರ್ 2ರಂದು ಸುಂಕದಕಟ್ಟೆಯ ಶ್ರೀನಿವಾಸ ಸರ್ಕಲ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆ ರಸ್ತೆ ಗುಂಡಿಯಿಂದಾಗಿ ವೇಗ ಕಡಿಮೆ ಮಾಡಿದಾಗ, ವಿನೋದ್ ತಕ್ಷಣ ಓಡಿ ಬಂದು ಆಕೆಯನ್ನು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಹಿಂದೆ ಕಾರಿನಲ್ಲಿ ಬರುತ್ತಿದ್ದ ಮಹಿಳೆಯ ಪತಿ ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ ಕಾಮುಕ ತಪ್ಪಿಸಿಕೊಂಡು ಪರಾರಿಯಾಗಿದ್ದ. ತಕ್ಷಣ 112ಕ್ಕೆ ಕರೆ ಮಾಡಲಾಗಿದ್ದು, ಹೊಯ್ಸಳ ಪೊಲೀಸರ ಸಹಕಾರದಿಂದ ಆರೋಪಿಯನ್ನು ಬಂಧಿಸಲಾಗಿದೆ.
ಯಾರೂ ಕಂಪ್ಲೇಂಟ್ ಕೊಡಲ್ಲ ಎಂದೇ ಹೀಗೆ ಮಾಡಿದೆ ಎಂದ ಕಾಮುಕ
ಯಾರೂ ದೂರು ನೀಡುವುದಿಲ್ಲ ಎಂಬ ಧೈರ್ಯದಿಂದಲೇ ನಿರಂತರವಾಗಿ ಈ ರೀತಿಯ ಕೃತ್ಯ ನಡೆಸುತ್ತಿದ್ದುದಾಗಿ ವಿಚಾರಣೆ ವೇಳೆ ಪಾಪಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ವಿನೋದ್‌ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಮಹಿಳೆಯರು ಇಂತಹ ಘಟನೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
