Ad image

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್​​ಗೆ ಹೊಸ ಟ್ವಿಸ್ಟ್: ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಲೋಕಾ ವಶಕ್ಕೆ

Team SanjeMugilu
2 Min Read

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟ್ ಹಂಚಿಕೆ ಅಕ್ರಮ ಆರೋಪ ಕೇಸ್‌ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಹೆಚ್ಚಿನ ವಿಚಾರಣೆಗಾಗಿ ಅವರನ್ನು 24 ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಲಾಗಿದೆ.
ಮೈಸೂರು ಲೋಕಾಯುಕ್ತ ಎಸ್‌ಪಿ ಉದಯ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೆಚ್ಚಿನ ವಿಚಾರಣೆಗೆ ಒಂದು ದಿನ ತಮ್ಮ ವಶಕ್ಕೆ ನೀಡುವಂತೆ ಲೋಕಾ ಪೊಲೀಸರು ನ್ಯಾಯಾಲಯದಲ್ಲಿ ಕೋರಿದ್ದು, ಇದೀಗ ಕೋರ್ಟ್​​ 24 ಗಂಟೆಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
24 ಗಂಟೆಗಳ ಕಾಲ ದಿನೇಶ್​​ ಕುಮಾರ್​​ ಲೋಕಾಯುಕ್ತ ಪೊಲೀಸರ ವಶಕ್ಕೆ
ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್, ಪ್ರಸ್ತುತ ಜಾರಿ ನಿರ್ದೇಶನಾಲಯ (ಇಡಿ) ಬಂಧನದಲ್ಲಿದ್ದು, ಜ್ಯುಡೀಷಿಯಲ್ ಕಸ್ಟಡಿಯಲ್ಲಿದ್ದಾರೆ. ಇಡಿ ಅವರನ್ನು ಸೆಪ್ಟೆಂಬರ್‌ನಲ್ಲಿ ಬಂಧಿಸಿತ್ತು ಮತ್ತು ಹಣ ಅಕ್ರಮ ಸಂಗ್ರಹ ಆರೋಪದಡಿ ತನಿಖೆ ನಡೆಸುತ್ತಿದೆ. ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಅವರ ಕಸ್ಟಡಿ ಕೋರಿದ್ದರು. ಈ ಕೋರಿಕೆಯನ್ನು ಪರಿಗಣಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಒಂದು ದಿನದ ಕಾಲ (24 ಗಂಟೆಗಳವರೆಗೆ) ಲೋಕಾಯುಕ್ತ ಪೊಲೀಸರಿಗೆ ನೀಡುವಂತೆ ಆದೇಶಿಸಿತು.
ಕೋರ್ಟ್ ನಲ್ಲಿಯೇ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು!
ಇಂದು ಜೈಲು ಸಿಬ್ಬಂದಿ ದಿನೇಶ್ ಕುಮಾರ್ ಅವರನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಿದರು. ನ್ಯಾಯಾಲಯದಲ್ಲಿಯೇ ಲೋಕಾಯುಕ್ತ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಮೈಸೂರು ಲೋಕಾಯುಕ್ತ ಎಸ್‌ಪಿ ಉದಯ್ ಅವರ ನೇತೃತ್ವದ ತಂಡವು ತನಿಖೆಯನ್ನು ತೀವ್ರಗೊಳಿಸಿದೆ. ಡಿಸೆಂಬರ್ 18 ರ ಒಳಗೆ ಈ ಕೇಸ್​ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಅಂತಿಮ ವರದಿ ಸಲ್ಲಿಸಬೇಕಿದೆ. ಈ ಹಿನ್ನಲೆ ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ.
ಮುಡಾ ಕೇಸ್‌ನ ಹಿನ್ನೆಲೆ!
ಮುಡಾ 50:50 ಅನುಪಾತದಲ್ಲಿ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಈ ಕೇಸ್ ದಾಖಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಸೈಟ್‌ಗಳನ್ನು ಅಕ್ರಮವಾಗಿ ಹಂಚಿದ ಆರೋಪವಿದೆ. ದಿನೇಶ್ ಕುಮಾರ್ ಅವರು ಆಯುಕ್ತರಾಗಿದ್ದ ಸಮಯದಲ್ಲಿ ಈ ಹಂಚಿಕೆ ನಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇಡಿ ತನಿಖೆಯಲ್ಲಿ ಅವರು 22.47 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ.ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು, ಆದರೆ ಆ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನೆಗಳು ಎದ್ದಿವೆ. ಇಡಿ ಸಹ ಕೇಸ್ ತನಿಖೆ ನಡೆಸುತ್ತಿದ್ದು, ದಿನೇಶ್ ಕುಮಾರ್ ಅವರ ಆಸ್ತಿಗಳನ್ನು ಜಪ್ತಿ ಮಾಡಿದೆ. ಈಗ ಲೋಕಾಯುಕ್ತ ಪೊಲೀಸರು ಅವರನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ಬೆಳವಣಿಗೆಯು ಕೇಸ್‌ಗೆ ಹೊಸ ಆಯಾಮವನ್ನು ನೀಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಲೋಕಾಯುಕ್ತ ತನಿಖೆಯು ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳನ್ನು ಬಲಪಡಿಸುತ್ತದೆಯೇ ಎಂಬುದರಲ್ಲಿ ಕುತೂಹಲವಿದೆ. ತನಿಖೆ ಮುಂದುವರಿದಂತೆ ಹೆಚ್ಚಿನ ವಿವರಗಳು ಹೊರಬೀಳುವ ನಿರೀಕ್ಷೆಯಿದೆ.

Share This Article