ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಕರ್ನಾಟಕ ಬಾಡಿಗೆ (ತಿದ್ದುಪಡಿ) 2025 ವಿಧೇಯಕದ ಮೇಲೆ ದೀರ್ಘ ಚರ್ಚೆ ನಡೆಸಿ ಅನುಮೋದನೆ ನೀಡಲಾಗಿದೆ.
ವಿಧೇಯಕವನ್ನು ಸದನದ ಸದಸ್ಯರ ಚರ್ಚೆಗೆ ಮುಂದಿಟ್ಟು ವಿವರಣೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಇದೊಂದು ಸರಳ ವಿಧೇಯಕ. ಇದರಲ್ಲಿರುವುದು ದೇಶದ ಹಳೆಯ ಕಾನೂನು. ಬಹುತೇಕ ರಾಜ್ಯಗಳಲ್ಲಿ ಹೋಲಿಕೆ ಇರುವ ಕಾನೂನು. ಈ ಹಿಂದೆ ಕೇಂದ್ರ ಸರ್ಕಾರ ಮಾದರಿ ವಿಧೇಯಕವನ್ನು ರೂಪಿಸಿದ ನಂತರ ಅದನ್ನು ಎಲ್ಲಾ ರಾಜ್ಯಗಳೂ ಒಂದೇ ಮಾದರಿಯಲ್ಲಿ ಅಳವಡಿಸಿಕೊಂಡಿದ್ದವು. ಆದರೆ, ಪ್ರಸ್ತುತ ಈ ವಿಧೇಯಕದಲ್ಲಿ ಕೆಲವು ಸರಳ ತಿದ್ದುಪಡಿಗಳನ್ನು ತರಲಾಗಿದೆ” ಎಂದರು.
“ಮೂಲ ವೀಧೇಯಕದಲ್ಲಿ ಉಲ್ಲಂಘನೆಯಾದರೆ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಆದರೆ, ಇಂತಹ ಸಣ್ಣಪುಟ್ಟ ತಪ್ಪಿಗೆ ಜೈಲು ಶಿಕ್ಷೆ ಸರಿಯಲ್ಲ ಎಂಬ ಚರ್ಚೆ ಇದೀಗ ದೇಶದಾದ್ಯಂತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ತಿದ್ದುಪಡಿಯ ಕರಡನ್ನು ಸಿದ್ದಪಡಿಸಿ ನಮಗೆ ಕಳಿಸಿಕೊಟ್ಟಿದೆ. ನಾವು ಈ ತಿದ್ದುಪಡಿ ಮೂಲಕ ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷೆಯ ರೂಪದಲ್ಲಿ ದಂಡ ಶುಲ್ಕ ಅಧಿಕವಾಗಬಹುದು ಆದರೆ, ಜೈಲಿಗೆ ಹೋಗುವ ಅಂಶವನ್ನು ತೆಗೆದುಹಾಕಲಾಗಿದೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನೂ ತಪ್ಪಿಸಬೇಕು ಎಂಬ ಸಲಹೆಗೆ ಪ್ರತಿಕ್ರಿಯೆ ನೀಡಿದ ಅವರು, “ಇವತ್ತಿಗೂ ಸಣ್ಣಪುಟ್ಟ ಬಾಡಿಗೆದಾರರಿಗೆ ಶೋಷಣೆ ಆಗುತ್ತಿದೆ ಎಂಬುದು ನಿಜ. ಅಂತವರನ್ನೂ ರಕ್ಷಿಸಲು ಈ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ನಾವು ಈ ಕಾನೂನನ್ನು ಅನುಸರಣೆ ಮಾಡುವುದನ್ನೇ ಮರೆತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಈ ಕಾನೂನನ್ನು ಅನುಷ್ಠಾನ ಮಾಡಿದರೆ, ಜನರಿಗೂ ಅರಿವು ಮೂಡಿಸಿದರೆ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನು ಗಣನೀಯವಾಗಿ ತಡೆಯಬಹುದು” ಎಂದು ಅಭಿಪ್ರಾಯಪಟ್ಟರು.
