ಬೆಂಗಳೂರು: ನಗರದಲ್ಲಿ ಚಳಿ ತೀವ್ರಗೊಳ್ಳುತ್ತಿದೆ. ತಾಪಮಾನ ಕುಸಿತದ ಎಫೆಕ್ಟ್ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಶೀತ, ನೆಗಡಿ, ಕೆಮ್ಮು ತಪಾಸಣೆಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ನಗರದಲ್ಲಿ ಕಳೆದ ಎರಡ್ಮೂರು ವಾರಗಳಿಂದ ಕನಿಷ್ಟ ತಾಪಮಾನ ದಾಖಲಾಗಿದೆ. ಚಳಿಗೆ ಜನ ನಡುಗುತ್ತಿದ್ದಾರೆ. 14 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಜನ ಮನೆಯಿಂದ ಹೊರಗಡೆ ಬರೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ನಗರದಲ್ಲಿ ಶೀತಗಾಳಿಯ ಎಫೆಕ್ಟ್ನಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನಗರದ ಕೆಸಿ ಜನರಲ್ ಆಸ್ಪತ್ರೆಗೆ ಮಕ್ಕಳು, ವಯಸ್ಕರು ಶೀತ, ಕೆಮ್ಮು ಅಂತ ಬರುತ್ತಿದ್ದಾರೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದು, ವೈದ್ಯರು ನಿಗಾ ವಹಿಸುತ್ತಿದ್ದಾರೆ.
ಚಳಿಗಾಲದ ಸಮಯದಲ್ಲಿ ಕೆಮ್ಮು, ಶೀತ, ನೆಗಡಿಯಿಂದ ಆಸ್ಪತ್ರೆಗೆ ಬರುವುದು ಸಹಜ. ಆದರೆ ಈ ಬಾರಿ ಚಳಿ ಹೆಚ್ಚು ಇರುವುದರಿಂದ ಹೆಚ್ಚಾಗಿ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಕೆಲವರು ತಪಾಸಣೆ ಮಾಡಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರೆ ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಆರೋಗ್ಯಕ್ಕೂ ಈ ಚಳಿ ಪರಿಣಾಮ ಬೀರಿದ್ದು, ಮಕ್ಕಳ ವಿಭಾಗವೂ ಭರ್ತಿಯಾಗಿದೆ.
ಈ ತಿಂಗಳಾಂತ್ಯದಲ್ಲಿ ಮತ್ತಷ್ಟು ಚಳಿ ಇರಲಿದ್ದು, ದಾಖಲೆಯ ಮಟ್ಟದಲ್ಲಿ ತಾಪಮಾನ ಕುಸಿಯಬಹುದು. ಹೀಗಾಗಿ ಬೆಚ್ಚನೆಯ ಉಡುಪುಗಳನ್ನು ಧರಿಸಿ, ಆರೋಗ್ಯವನ್ನ ಕಾಪಾಡಿಕೊಳ್ಳಿ. ಮಕ್ಕಳ ಆರೋಗ್ಯದ ಬಗ್ಗೆಯೂ ಪೋಷಕರು ಎಚ್ಚರಿಕೆ ವಹಿಸುವುದು ಸೂಕ್ತ.
