ಹಾಸನ: ಬೇಲೂರು ತಾಲೂಕು ಆಸ್ಪತ್ರೆಯಲ್ಲಿ 24 ಲಕ್ಷ ರೂ.ಗೂ ಹೆಚ್ಚು ಬೆಲೆ ಬಾಳುವ ವಸ್ತುಗಳ ಕಳವು ಆರೋಪ ಕೇಳಿಬಂದಿದೆ. ಸ್ಕ್ಯಾನಿಂಗ್ ಮಷಿನ್, ವೆಂಟಿಲೇಟರ್, ಮಾನಿಟರ್‌ಗಳು, ಆಕ್ಸಿಜನ್ ಸಿಲಿಂಡರ್‌ಗಳ ಸೇರಿ ಇತರೆ ವಸ್ತುಗಳು ಕಳವು ಆಗಿದೆ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳನ್ನು ಕೇಳಿದ್ರೆ ಉಡಾಫೆ ಉತ್ತರ ನೀಡುತ್ತಿದ್ದಾರೆ.
ಆಸ್ಪತ್ರೆಗೆ ಹಂತ ಹಂತವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಹಾಗೂ ಗರ್ಭಿಣಿಯರು ಆಗಮಿಸುವ ಹಿನ್ನೆಲೆ ಸ್ಕ್ಯಾನಿಂಗ್ ಮಿಷನ್, ವೆಂಟಿಲೇಟರ್‌ಗಳನ್ನು ಕಳೆದ ಎರಡು ವರ್ಷಗಳ ಹಿಂದೆ ಖರೀದಿ ಮಾಡಲಾಗಿತ್ತು. ಇದಕ್ಕೆ ಸಂಬಂಧಪಟ್ಟ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದ್ದು ಹೊಸದಾಗಿ ನೇಮಕ ಮಾಡಲು ಡಿಹೆಚ್‌ಓ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ವೇಳೆ ವಸ್ತುಗಳು ಕಳವಾಗಿರುವುದು ಕಂಡು ಬಂದಿದೆ. ಕೂಡಲೇ ಸಿಸಿಟಿವಿ ಪರಿಶೀಲನೆ ನಡೆಸಿದ್ದು ಆಸ್ಪತ್ರೆಯ ಸಿಬ್ಬಂದಿ ಪ್ರದೀಪ್ ಹಾಗೂ ಖಾಸಗಿ ಆಸ್ಪತ್ರೆ ಚಾಲಕ ಸೂಫಿಯಾನ್ ಸ್ಕ್ಯಾನಿಂಗ್ ಮಿಷನ್ ತೆಗೆದುಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ.
ಈ ಕಳ್ಳತನದ ಹಿಂದೆ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ಅಂಬ್ಯುಲೆನ್ಸ್ ಚಾಲಕ ಸೇರಿದಂತೆ ದೊಡ್ದ ಜಾಲವೇ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೊರೋನ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕೊಡಲಾಗಿದ್ದ ಆಕ್ಸಿಜನ್ ಸಿಲಿಂಡರ್‌ಗಳು ಸಹ ಕಳುವಾಗಿರುವುದು ಅಧಿಕಾರಿಗಳ ಭೇಟಿ ವೇಳೆ ಬಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಸ್ತ್ರಚಿಕಿತ್ಸಕಿ ಜಯಲಕ್ಷ್ಮೀ, ನೂತನ ವೈದ್ಯರಿಗೆ ಕೊಠಡಿ ನೀಡಲು ಪರಿಶೀಲನೆ ನಡೆಸುತ್ತಿದ್ದೆವು. ಆಗ ಸ್ಕ್ಯಾನಿಂಗ್ ರೂಂ ನೋಡಿದಾಗ ಮಿಷನ್ ಇರಲಿಲ್ಲ. ಸಿಬ್ಬಂದಿ ಪ್ರಶ್ನಿಸಿದಾಗ ಅದು ಕೆಟ್ಟು ಹೋಗಿದ್ದು, ರಿಪೇರಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದ್ದರೂ ಹಣದಾಸೆಗೆ ಅಲ್ಲಿನ ಸಿಬ್ಬಂದಿ ಕಳ್ಳತನ ಮಾಡಿ ಹಣಕ್ಕಾಗಿ ದಂಧೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಿದೆ.
