ಬೆಂಗಳೂರು : ಬಳ್ಳಾರಿ ಫೈಯರಿಂಗ್ ಕೇಸ್ ದೆಹಲಿ ಅಂಗಳದಲ್ಲೂ ಸದ್ದು ಮಾಡಿದೆ. ಪದೇ ಪದೇ ರಾಜ್ಯದಲ್ಲಿ ನಡೆಯುತ್ತಿರೋ ಅಹಿತಕರ ಘಟನೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಆತಂಕ ಹೊರಹಾಕಿದೆ. ಬಳ್ಳಾರಿ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೇ ಬಲಿಯಾಗಿದ್ದು, ಶಾಸಕನ ಮೇಲಿನ ಎಫ್ಐಆರ್ ಕಾಂಗ್ರೆಸ್ ಪಕ್ಷಕ್ಕೂ ಡ್ಯಾಮೇಜ್ ಮಾಡುವ ವಿಚಾರವಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಹೈಕಮಾಂಡ್ ಈ ಬಗ್ಗೆ ವರದಿ ಕೇಳಿದೆ.
ವರದಿ ಕೇಳಿದ ಕಾಂಗ್ರೆಸ್ ಹೈಕಮಾಂಡ್
ಬಳ್ಳಾರಿಯಲ್ಲಿ ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರ ಬಳಿ ಕಾಂಗ್ರೆಸ್ ಹೈಕಮಾಂಡ್ ವರದಿ ಕೇಳಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸಿಎಂ, ಡಿಸಿಎಂ ಬಳಿ ವರದಿ ಕೇಳಿದ್ದಾರೆ.
ಬಳ್ಳಾರಿ ಗಲಭೆಗೆ ಕಾರಣ ಏನು?
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ದೊಡ್ಡ ಗಲಭೆಯೇ ನಡೆದಿದೆ. ಗುಂಡಿನ ಸದ್ದು ಬಳ್ಳಾರಿ ಜನರನ್ನ ಬೆಚ್ಚಿಬೀಳಿಸಿದೆ. ಘಟನೆ ಬಗ್ಗೆ ಹೈಕಮಾಂಡ್ ವರದಿ ಕೇಳಿದ್ದು, ಸಣ್ಣ ಘಟನೆ ದೊಡ್ಡದಾಗಲು ಕಾರಣ ಏನು? ಪದೇ ಪದೇ ಕಾನೂನು ಸುವ್ಯವಸ್ಥೆ ಬಗ್ಗೆ ಈ ರೀತಿ ಆರೋಪಗಳು ಬರ್ತಿರೋದು ಯಾಕೆ? ಎಂದು ಹೈಕಮಾಂಡ್ ಪ್ರಶ್ನೆ ಮಾಡಿದೆ ಎಂದು ತಿಳಿದು ಬಂದಿದೆ.
ನಮ್ಮ ಕಾರ್ಯಕರ್ತ ಹೇಗೆ ಸಾವನ್ನಪ್ಪಿದ?
ಯಾರ ಬಂದೂಕಿನಿಂದ ಗುಂಡು ತಗಲಿದೆ. ಘಟನೆಯಲ್ಲಿ ನಮ್ಮ ಕಾರ್ಯಕರ್ತ ಹೇಗೆ ಸಾವನ್ನಪ್ಪಿದ್ದಾನೆ. ಕಾರ್ಯಕರ್ತನ ಕುಟುಂಬದ ಹಿನ್ನಲೆ, ಬೇಕಾಗಿರುವ ಅಗತ್ಯ ನೆರವು ಸೇರಿದಂತೆ ಪ್ರಕರಣದ ಸಂಪೂರ್ಣ ವರದಿ ನೀಡುವಂತೆ ಕೆ ಸಿ ವೇಣುಗೋಪಾಲ್ ಕೇಳಿದ್ದಾರಂತೆ.
ಭರತ್ ರೆಡ್ಡಿ ವಿರುದ್ದ ಸಿಎಂ ಸಿದ್ದರಾಮಯ್ಯ ಗರಂ
ಘಟನೆ ಬಳಿಕ ಬಳ್ಳಾರಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ವಿರುದ್ದ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ರು. ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವ್ರು ಕೂಡಲೇ ಸತ್ಯಶೋಧನಾ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿದ್ದಾರೆ. ಈ ನಡುವೆ ಡಿಜಿಪಿಗೆ ಬಿಜೆಪಿ ನಿಯೋಗ ದೂರು ನೀಡಿದೆ. ಬಳ್ಳಾರಿ ಚಲೋಗೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಗುಂಡೇಟಿಗೆ ಕೈ ಕಾರ್ಯಕರ್ತ ಬಲಿ; ಕಾಂಗ್ರೆಸ್ ಹೈಕಮಾಂಡ್ ಗರಂ; ವರದಿ ಕೇಳಿದ ಕೆಸಿವಿ
