ಬೆಂಗಳೂರು: ಕಾಲೇಜು ಕ್ಯಾಂಪಸ್ನಲ್ಲಿ ರಾಜಕೀಯ ಎಂಟ್ರಿ! 30 ವರ್ಷಗಳ ಬಳಿಕ ಸ್ಟೂಡೆಂಟ್ ಎಲೆಕ್ಷನ್ ರಿಟರ್ನ್ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಹೌದು ಮೂರು ದಶಕಗಳ ಬಳಿಕ ರಾಜ್ಯದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ಮತ್ತೆ ರಾಜಕೀಯದ ಘೋಷಣೆಗಳು ಮೊಳಗುವ ಸಾಧ್ಯತೆ ಇದೆ. 30 ವರ್ಷಗಳಿಂದ ಬ್ಯಾನ್ ಆಗಿದ್ದ ಸ್ಟೂಡೆಂಟ್ ಯೂನಿಯನ್ ಎಲೆಕ್ಷನ್ಗಳನ್ನು ಮತ್ತೆ ಆರಂಭಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ವಿದ್ಯಾರ್ಥಿ ನಾಯಕತ್ವವನ್ನು ಬೆಳೆಸುವ ಉದ್ದೇಶದೊಂದಿಗೆ, ಕಾಲೇಜು ರಾಜಕಾರಣಕ್ಕೆ ಪುನರ್ಜನ್ಮ ನೀಡಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.
ವಿದ್ಯಾರ್ಥಿ ಚುನಾವಣೆ ನೆನಪು!
ರಾಜ್ಯಾದ್ಯಂತ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಚುನಾವಣೆಯ ಸದ್ದು ಕೇಳಿಬರುವಂತೆ ಮಾಡುವ ಈ ನಿರ್ಧಾರ, ಒಂದೆಡೆ ವಿದ್ಯಾರ್ಥಿ ಪ್ರಜಾಸತ್ತಾತ್ಮಕ ಹಕ್ಕುಗಳ ಪರವಾದರೆ, ಮತ್ತೊಂದೆಡೆ ಹಳೆಯ ಕಹಿ ಅನುಭವಗಳನ್ನು ಮತ್ತೆ ನೆನಪಿಸುತ್ತಿದೆ. ಕಳೆದ ಬಾರಿ, ಅಂದರೆ 1996-97ರಲ್ಲಿ, ರಾಜ್ಯದ ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆಗಳು ನಡೆದಿದ್ದವು. ಆ ಸಮಯದಲ್ಲಿ ಚುನಾವಣೆ ಎಂದರೆ ಕೇವಲ ಮತದಾನವಲ್ಲ, ಅದು ಗಂಭೀರ ರಾಜಕೀಯ ಕದನವಾಗಿತ್ತು. ಚುನಾವಣೆ ಸಮಯದಲ್ಲಿ ಗಲಾಟೆ, ದೊಂಬಿ, ಹಲ್ಲೆ ತಪ್ಪಿಸಲು ರೌಡಿ ಶೀಟರ್ಗಳನ್ನು ಮುನ್ನೆಚ್ಚರಿಕೆಯಿಂದ ವಶಕ್ಕೆ ತೆಗೆದುಕೊಳ್ಳುವ ಪರಿಸ್ಥಿತಿ ಕೂಡ ಇತ್ತು.
ಸ್ಟೂಡೆಂಟ್ ಇಲೆಕ್ಷನ್ ರಿಟರ್ನ್?
ವಿಶೇಷವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ನಡೆದ ಭಾರೀ ಮಾರಾಮಾರಿ, ಹಿಂಸಾಚಾರ, ಗಲಾಟೆಗಳು ಸರ್ಕಾರಕ್ಕೆ ತಲೆನೋವಾಗಿದ್ದವು. ಆ ಘಟನೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು. ಅದಾದ ಬಳಿಕ, ಸುಮಾರು 30 ವರ್ಷಗಳ ಕಾಲ ಕಾಲೇಜು ರಾಜಕಾರಣಕ್ಕೆ ಬೀಗ ಬಿದ್ದಂತಾಗಿತ್ತು. ಇದೀಗ ಆ ಬೀಗವನ್ನು ತೆಗೆಯಲು ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಸರ್ಕಾರದ ಆಶಯವೇನು
ವಿದ್ಯಾರ್ಥಿ ಚುನಾವಣೆಗಳ ಪುನರಾರಂಭದ ಕುರಿತು ಉನ್ನತ ಶಿಕ್ಷಣ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಜನವರಿ 13ರಂದು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಮಹತ್ವದ ಸಭೆ ನಡೆಸಲು ಸೂಚನೆ ನೀಡಲಾಗಿದೆ. ಸರ್ಕಾರದ ವಾದದಂತೆ, ಈ ಚುನಾವಣೆಯ ಉದ್ದೇಶ ಕಾಲೇಜುಗಳನ್ನು ರಾಜಕೀಯ ಅಡ್ಡೆಗಳಾಗಿ ಮಾಡುವುದು ಅಲ್ಲ, ಬದಲಾಗಿ ಭವಿಷ್ಯದ ನಾಯಕತ್ವವನ್ನು ರೂಪಿಸುವುದಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು, ನಾಯಕತ್ವ ಗುಣಗಳು ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಸುವುದು ಸರ್ಕಾರದ ಆಶಯ.
ಎದುರಿರುವ ಸವಾಲು?
ಆಟ-ಪಾಠ ನಡೆಯಬೇಕಾದ ಕ್ಯಾಂಪಸ್ಸುಗಳಲ್ಲಿ ಮತ್ತೆ ರಾಜಕೀಯ ಸಂಘರ್ಷಗಳು ತಲೆದೋರಲ್ವಾ? ಹಳೆಯ ದಿನಗಳಂತೆ ಗಲಾಟೆ, ದೊಂಬಿ, ಹಲ್ಲೆಗಳು ಮರುಕಳಿಸಲ್ವಾ? ವಿದ್ಯಾರ್ಥಿ ರಾಜಕಾರಣ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲವೇ? ಎನ್ನುವ ಸವಾಲುಗಳು ಎದುರಾಗುವ ಸಾಧ್ಯತೆ ಇರಲಿದೆ ಎನ್ನಲಾಗಿದೆ. ಈ ಬಾರಿ ಸರ್ಕಾರ ಚುನಾವಣೆಗಳನ್ನು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ, ಕಟ್ಟುನಿಟ್ಟಿನ ಮಾರ್ಗಸೂಚಿಗಳೊಂದಿಗೆ ನಡೆಸಲು ಚಿಂತಿಸಿದೆ ಎನ್ನಲಾಗಿದ್ದು, ಮುಂದೆ ನಡೆಯನ್ನು ಗಮನಿಸಬೇಕಾಗಿದೆ. ಈ ನಿಟ್ಟಿನಲ್ಲಿ 30 ವರ್ಷಗಳ ನಂತರ ಕಾಲೇಜು ಕ್ಯಾಂಪಸ್ಸಿಗೆ ಮರಳುತ್ತಿರುವ ಸ್ಟೂಡೆಂಟ್ ಎಲೆಕ್ಷನ್, ಹೊಸ ನಾಯಕತ್ವದ ಜನನವಾಗುತ್ತದೆಯೇ? ಅಥವಾ ಹಳೆಯ ಗಾಯಗಳನ್ನು ಮತ್ತೆ ಕೆದಕುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರ ಕಾಲವೇ ನೀಡಬೇಕಿದೆ.
ಆಟ-ಪಾಠದ ನಡುವೆ ರಾಜಕೀಯ! ಕಾಲೇಜುಗಳಲ್ಲಿ ಮತ್ತೆ ಎಲೆಕ್ಷನ್ ಅಬ್ಬರ?
