Ad image

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಕೇಸ್; ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳು ಎಂದು ವಿಜಯೇಂದ್ರ ಕಿಡಿ

Team SanjeMugilu
2 Min Read

ಬೆಂಗಳೂರು: ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಅನ್ಯಕೋಮಿನವರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಹಿಂದೂ ಸಂಘಟನೆಗಳು ಭಾರೀ ಆಕ್ರೋಶ ಹೊರಹಾಕಿದೆ. ಘಟನೆ ಸಂಬಂಧ ಜೆಜೆಆರ್ ನಗರ ಠಾಣೆಯಲ್ಲಿ FIR ದಾಖಲಾಗಿದೆ. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ​ ಗುಂಡಾಗಿರಿ ಹೆಚ್ಚಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಟ್ವೀಟ್ ಮೂಲಕ ಘಟನೆಯನ್ನ ಖಂಡಿಸಿದ್ದಾರೆ.
ಟ್ವೀಟ್ ಮೂಲಕ ವಿಜಯೇಂದ್ರ ಆಕ್ರೋಶ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹೊಸ ವರ್ಷ ರಾಜ್ಯದ ಪಾಲಿಗೆ ಹರ್ಷದಾಯಕವಾಗುವುದಿರಲಿ, ಈ 3-4 ದಿನಗಳಲ್ಲಿ, ಬಳ್ಳಾರಿಯಲ್ಲಿ ನಮ್ಮ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಮೇಲೆ ಕೊಲೆ ಯತ್ನ ನಡೆದಿದೆ, ಯಲ್ಲಾಪುರದಲ್ಲಿ ಹಾಡಹಗಲೇ ಹಿಂದೂ ಹುಡುಗಿಯ ಹತ್ಯೆ ಪ್ರಕರಣ ನಡೆದಿದೆ, ಬೆಂಗಳೂರಿನಲ್ಲಿ ಓಂಶಕ್ತಿ ಭಕ್ತರ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆದು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಬರೆದಿದ್ದಾರೆ.
‘ಗೂಂಡಾ ರಾಜ್ಯ’ ತಲೆ ಎತ್ತಿದೆ
”ಕಾಂಗ್ರೆಸ್​ ಸರ್ಕಾರದ ಕೀಳು ತುಷ್ಟೀಕರಣ, ಓಟ್ ಬ್ಯಾಂಕ್ ರಾಜಕೀಯಗಳಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ ಅಥವಾ ಸತ್ತಿದೆಯೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆ ಮೇಲೆ ನಡೆದ ಕಲ್ಲೆಸೆತ ಪ್ರಕರಣವನ್ನು ಪಕ್ಷ ಕಟುವಾಗಿ ಖಂಡಿಸುತ್ತದೆ. ಘಟನೆಯಲ್ಲಿ ಪಾಲ್ಗೊಂಡಿದ್ದ ಅಮಾಯಕ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದು, ರಾಜ್ಯದಲ್ಲಿ ‘ಗೂಂಡಾ ರಾಜ್ಯ’ ತಲೆ ಎತ್ತಿರುವುದಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನವಾಗಿದೆ ಎಂದು ಟ್ವೀಟ್​ನಲ್ಲಿ ಕಿಡಿಕಾರಿದ್ರು.
‘ಹಿಂದೂಗಳ ಹಬ್ಬ, ಆಚರಣೆಗಳಿಗಿಲ್ಲ ರಕ್ಷಣೆ’
ರಾಜ್ಯ ಸರ್ಕಾರ ತಮ್ಮ ಬಗ್ಗೆ ಮೃಧುಧೋರಣೆ ಹೊಂದಿರುವುದು ತಿಳಿದಿರುವುದರಿಂದಲೇ ರಾಜ್ಯದಲ್ಲಿ ಮೇಲಿಂದ ಮೇಲೆ ಮತಾಂಧರ, ದುಷ್ಕರ್ಮಿಗಳ ಅಪರಾಧಿ ಕೃತ್ಯಗಳು, ಅಟ್ಟಹಾಸಗಳು ನಡೆಯುತ್ತಿವೆ. ನಮ್ಮ ನೆಲದಲ್ಲಿ, ನಮ್ಮ ಧಾರ್ಮಿಕ ಆಚರಣೆಗಳನ್ನು, ನಾವೇ ಭಯದಿಂದ ಆಚರಿಸುವ ಪರಿಸ್ಥಿತಿ ನಿರ್ಮಿಸಿರುವ ಕಾಂಗ್ರೆಸ್ ದುರಾಡಳಿತ, ‘ಗೂಂಡಾಗಿರಿ ಗ್ಯಾರಂಟಿ’ ಯಿಂದಾಗಿ ಬಹುಸಂಖ್ಯಾತರೇ ಭಯದಿಂದ ಬದುಕುವಂತಾಗಿದೆ. ತಮ್ಮ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಕೂಡ ತುಳಿಯುತ್ತಿರುವ ಈ ಕಾಂಗ್ರೆಸ್ ಸರ್ಕಾರ, ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕೆಟ್ಟ, ದೌರ್ಭಾಗ್ಯಪೂರ್ಣ ಸರ್ಕಾರವಾಗಿದೆ. ಹಿಂದೂಗಳ ಹಬ್ಬಗಳಿಗೆ, ಆಚರಣೆಗಳಿಗೆ ರಕ್ಷಣೆ ಇಲ್ಲದ ಇಂತಹ ಉದ್ವಿಗ್ನ ಸ್ಥಿತಿ ಕರ್ನಾಟದಲ್ಲಿ ಬಂದಿರುವುದೇ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆಯಾಗಿದೆ.
‘ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳು’
ಶಾಂತಿ ಕದಡಲು, ಮೇಲಿಂದ ಮೇಲೆ ಇಂತಹ ಉದ್ದೇಶಪೂರ್ವಕ ಪ್ರಚೋದನಕಾರಿ ಕೃತ್ಯಗಳು ನಡೆಯುತ್ತಿದ್ದರೂ, ರಾಜ್ಯ ಸರ್ಕಾರದ ದಿವ್ಯ ಮೌನ ನಾಚಿಕೆಗೇಡು ಮಾತ್ರವಲ್ಲ, ಹೇಡಿತನ, ನಿರ್ಲಜ್ಜತನದ ಪರಮಾವಧಿ. ದ್ವೇಷ ಭಾಷಣ ಇರಲಿ, ತನ್ನ ಓಟ್ ಬ್ಯಾಂಕಿನ ದ್ವೇಷ ಕೃತ್ಯಗಳಿಗೂ ಕಾಂಗ್ರೆಸ್ ಸರ್ಕಾರ ಏನೂ ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದು ಗೊತ್ತಿರುವುದರಿಂದಲೇ ಸಮಾಜಘಾತುಕರು ಭಯವಿಲ್ಲದೆ ಮನಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು, ಗೃಹ ಸಚಿವರೇ ಸಂಪೂರ್ಣ ಹೊಣೆಗಾರರು! ಮಾನ್ಯ ಮುಖ್ಯಮಂತ್ರಿಗಳೇ, ದುಷ್ಕೃತ್ಯ ಎಸಗಿರುವ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ, ಜೈಲಿಗಟ್ಟಿ. ಇಲ್ಲದಿದ್ದರೆ ರಾಜ್ಯಾದ್ಯಂತ ಜನಾಗ್ರಹದ ಕಿಚ್ಚು ಎದುರಿಸಲು ಸಿದ್ಧರಾಗಿ. ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ವಿಜಯೇಂದ್ರ ಕಿಡಿಕಾರಿದ್ದಾರೆ.

Share This Article