ಬೆಂಗಳೂರು: ಅಕ್ರಮ ವಲಸಿಗರ ಶೆಡ್ಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ಪುನೀತ್ ಕೆರೆಹಳ್ಳಿ ಅವರನ್ನ ಮನೆ ಬಳಿ ವಶಕ್ಕೆ ಪಡೆದ ಬನ್ನೇರುಘಟ್ಟ ಪೊಲೀಸರು , ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಪುನೀತ್ ಕೆರೆಹಳ್ಳಿ ವಿರುದ್ಧ ಕೇಳಿ ಬಂದಿರುವ ಆರೋಪವೇನು?
ಅಕ್ರಮ ವಲಸಿಗರ ಶೆಡ್ಗಳಿಗೆ ಹೋಗಿ ಶೋಧ
ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹಾಗೂ ಸಹಚರರು ಸೇರಿ ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಶೆಡ್ಗಳಿಗೆ ಹೋಗಿ ಪರಿಶೀಲನೆ ನಡೆಸುತ್ತಿದ್ರು ಎನ್ನಲಾಗ್ತಿದೆ. ಶೆಡ್ ವಾಸಿಗಳ ಬಳಿ ರಾಷ್ಟ್ರೀಯತೆ ಬಗ್ಗೆ ಪ್ರಶ್ನೆ ಮಾಡಿದ್ದ ಹಿನ್ನೆಲೆ ದೂರು ದಾಖಲಾಗಿತ್ತು. ಈ ಸಂಬAಧ ಪುನೀತ್ ಕೆರೆಹಳ್ಳಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿ ಆಗಿದೆ.
ರಾತ್ರಿ ವಶಕ್ಕೆ ಪಡೆದ ಪೊಲೀಸರು
ನಿನ್ನೆ ರಾತ್ರಿ ಪುನೀತ್ ಕೆರೆಹಳ್ಳಿ ಮನೆಯ ಬಳಿಯೇ ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚಿಗೆ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ‘ದ್ವೇಷದ ಮಾತಿನ ವಿರುದ್ದ ಜನಾಂದೋಲನ ವತಿಯಿಂದ ಇಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ.
ʼಪುನೀತ್ ಕೆರೆಹಳ್ಳಿ ಎಂಬ ಕೊಲೆ ಆರೋಪಿ ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳಿಗೆ ಬೇಡಿಕೆ ಇಟ್ಟು, ಬೆದರಿಕೆ ಹಾಗೂ ಭೀತಿಯನ್ನುಂಟುಮಾಡುತ್ತಿದ್ದಾರೆ’ ಎಂದು ಮೇಲ್ ಮೂಲಕ ದೂರಿದ್ರು.
ಪುನೀತ್ ಬಂಧನಕ್ಕೆ ಬೆಂಬಲಿಗರ ಕಿಡಿ
ಎಡಪಂಥೀಯರ ಒತ್ತಡಕ್ಕೆ ಮಣಿದು ಸರ್ಕಾರ ಪುನೀತ್ ಕೆರೆಹಳ್ಳಿ ಅವರನ್ನ ವಶಕ್ಕೆ ಪಡೆದಿದೆ. ಪೊಲೀಸರ ಕ್ರಮವನ್ನ ನಾವು ಖಂಡಿಸುತ್ತೇವೆ ಎಂದು ಪುನೀತ್ ಕೆರೆಹಳ್ಳಿ ಬೆಂಬಲಿಗರು ವಿಡಿಯೋ ಮಾಡಿ ಕಿಡಿಕಾರಿದ್ದಾರೆ.
ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಪೊಲೀಸರ ವಶಕ್ಕೆ! ರಾತ್ರೋ ರಾತ್ರಿ ಕರೆದೊಯ್ದಿದ್ದು ಯಾಕೆ?
