Ad image

ಪ್ರಶ್ನೆಪತ್ರಿಕೆ ಲೀಕ್ ತಡೆಗೆ ಕಠಿಣ ಕ್ರಮ: ಆರೋಪಿಗಳಷ್ಟೇ ಅಲ್ಲ ಕಾಲೇಜುಗಳೂ ಬ್ಲಾಕ್ ಲಿಸ್ಟ್​ಗೆ, ಮಾನ್ಯತೆ, ಅನುದಾನಕ್ಕೂ ಕತ್ತರಿ

Team SanjeMugilu
1 Min Read

ಬೆಂಗಳೂರು: ಪಿಯುಸಿ ಪರೀಕ್ಷೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಮಕ್ಕಳಲ್ಲಿ ಪೋಷಕರಲ್ಲಿ ಆತಂಕ ತಂದಿದ್ದಾರೆ. ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಜನವರಿ 6ರಂದು ನಡೆದ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಮಾಡಲಾಗಿತ್ತು. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಮಾಡಲಾಗಿತ್ತು.

ಬಳಿಕ ಎಚ್ಚೆತ್ತುಗೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಅಲರ್ಟ್ ಆಗಿದೆ. ಪ್ರಶ್ನೆಪತ್ರಿಕೆ ಲೀಕ್ ಮಾಡುವ ಉಪನ್ಯಾಸಕರು ಕೆಲಸ ಮಾಡುವ ಕಾಲೇಜುಗಳನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸಲು ಮುಂದಾಗಿದೆ. ಕಪ್ಪು ಪಟ್ಟಿಗೆ ಸೇರುವ ಜೊತೆಗೆ ಮಾನ್ಯತೆ ಹಾಗೂ ಅನುದಾನಕ್ಕೂ ಕತ್ತರಿ ಹಾಕಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.

ಇನ್ಮುಂದೆ ಪ್ರಶ್ನೆ ಪತ್ರಿಕೆ ಲೀಕ್ ಆದರೆ ಯಾವ ಕಾಲೇಜಿನಿಂದ ಲೀಕ್ ಆಯಿತೋ ಆ ಕಾಲೇಜನ್ನು ಕಪ್ಪು ಪಟ್ಟಿಗೆ ಸೇರಿಸಲು ಹಾಗೂ ಮಾನ್ಯತೆ, ಅನುದಾನಕ್ಕೆ ಕತ್ತರಿ ಹಾಕುವ ಬಗ್ಗೆಯೂ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಸರ್ಕಾರಿ ಕಾಲೇಜುಗಳಾದರೆ ಅನುದಾನದ ಜೊತೆಗೆ ಕಪ್ಪುಪಟ್ಟಿಗೆ ಸೇರಿಸುವುದು ಹಾಗೂ ಅನುದಾನ ರಹಿತ ಕಾಲೇಜಾದರೆ ಅಂತಹ ಖಾಸಗಿ ಕಾಲೇಜಿನ ಮಾನ್ಯತೆ ರದ್ದು ಮಾಡುವ ಬಗ್ಗೆ ಕ್ರಮಕ್ಕೆ ಮುಂದಾಗಿದೆ.

ಪ್ರಶ್ನೆಪತ್ರಿಕೆ ಲೀಕ್ ಮಾಡಿದ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಾಮೀಲಾದ ಶಿಕ್ಷಕರ ಮೇಲೆಯೂ ಕಾನೂನು ಕ್ರಮಕ್ಕೆ ಹಾಗೂ ಶಿಸ್ತು ಕ್ರಮಕ್ಕೆ ಮುಂದಾಗಿದೆ.  ಸಾಮಾಜಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಲೀಕ್ ಮಾಡಿ ವೈರಲ್ ಮಾಡುವ ಕಿಡಗೇಡಿಗಳ ವಿರುದ್ಧವೂ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಣದಲ್ಲಿನ ಕಿಡಗೇಡಿಗಳ ಖಾತೆಗಳ ಮಾಹಿತಿ ನೀಡಿದೆ.

Share This Article