ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸೂಳೆ ಮುರ್ಕಿ ಕ್ರಾಸ್ ಬಳಿ ಅಪಘಾತದಲ್ಲಿ ಸಿದ್ದಾಪುರ ಮೂಲದ ಮಂಜುನಾಥ ಮತ್ತು ಚಂದ್ರಶೇಖರ್ ಎಂಬ ಮೀನಿನ ವ್ಯಾಪಾರಿಗಳ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆಕಸ್ಮಿಕ ಅಪಘಾತ, ಹಣಕ್ಕಾಗಿ ನಡೆದ ಕೊಲೆ ಎಂಬುದು ಸಾಬೀತಾಗಿದೆ.
ಹಣಕ್ಕಾಗಿ ಜೊತೆಗಿದ್ದವರನ್ನೇ ಕೊಲೆ ಮಾಡಿದ ಪಾಪಿ ಪ್ರಮೋದ್ ನಾಯ್ಕ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜನವರಿ 7 ರಂದು ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಬೆಂಕಿ ಗಾಹುತಿಯಾದ ಕಾರಿನಲ್ಲಿ ಎರಡು ಮೃತ ದೇಹಗಳು ಕಾರಿನೊಂದಿಗೆ ಸುಟ್ಟ ರೀತಿಯಲ್ಲಿ ಪತ್ತೆ ಆಗಿತ್ತು. ಹೊನ್ನಾವರ ಪೊಲೀಸರು ಆಕಸ್ಮಿಕ ಅಪಘಾತ ಎಂದು ಮೊದಲು ದೂರು ತೆಗೆದುಕೊಂಡಿದ್ದರು. ನಂತರ ಮೃತರು ಸಿದ್ದಾಪುರ ಮೂಲದ ಮಂಜುನಾಥ ಮತ್ತು ಚಂದ್ರಶೇಖರ್ ಎಂಬುದು ದೃಢಪಟ್ಟಿತ್ತು.
ಇನ್ನು ಕುಟುಂಬದವರು ಇದು ಆಕಸ್ಮಿಕ ಅಪಘಾತವಲ್ಲ ಕೊಲೆ ಎಂದು ದೂರು ನೀಡಿದ್ದರು. ತನಿಖೆ ಕೈಗೊಂಡ ಹೊನ್ನಾವರ ಪೊಲೀಸರು ಪ್ರಮೋದ್ ಮೇಲೆ ಅನುಮಾನಗೊಂಡು ಆತನನ್ನ ತನಿಖೆ ನಡೆಸಲು ಹೋದಾಗ ಆತ ಪರಾರಿಯಾಗಿದ್ದ 14 ದಿನದ ಬಳಿಕ ಆತನನ್ನು ಪೊಲೀಸರು ಬಂಧಿಸಿದಾಗ, ಮೃತರಾದ ಚಂದ್ರಶೇಖರ ಮತ್ತು ಮಂಜುನಾಥ್ ಇಬ್ಬರು ಪ್ರಮೋದ್ ಜೊತೆಗೆ ಕೆಲಸ ಮಾಡುತಿದ್ದು ವ್ಯವಹಾರಕ್ಕಾಗಿ 5 ಲಕ್ಷ ಹಣ ಸಾಲ ಮಾಡಿದ್ದು ಹಾಗೂ ತಾನೇ ಮಾಡಿಸಿದ ಕೋಟಿ ಇನ್ಶುರೆನ್ಸ್ ಹಣಕ್ಕಾಗಿ ಇಬ್ಬರಿಗೂ ಮಧ್ಯದಲ್ಲಿ ಕೀಟನಾಶಕ ಸೇರಿಸಿ ಹತ್ಯೆ ಮಾಡಿ ತನ್ನ ಸ್ನೇಹಿತರ ಸಹಾಯದಿಂದ ಕಾರನ್ನ ಸೂಳೆ ಮುರ್ಕಿ ಕ್ರಾಸ್ ನಲ್ಲಿ ತಳ್ಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಪ್ರಮೋದ್ ಪೊಲೀಸರ ವಶದಲ್ಲಿದ್ದು ತನಿಖೆ ಮುಂದುವರೆದಿದ್ದು ಉಳಿದ ಅಪರಾಧಿಗಳಿಗಾಗಿ ಶೋಧ ನಡೆದಿದೆ.
