Ad image

ಹೋಮ್​ ವರ್ಕ್​ ಮಾಡಿಲ್ಲ ಅಂತ ಮನಸೋಇಚ್ಛೆ ಥಳಿಸಿದ ಶಿಕ್ಷಕಿ; ಹಲ್ಲೆ ಬಳಿಕ ಬೆದರಿಕೆ ಆರೋಪ

Team SanjeMugilu
2 Min Read

ಬೆಂಗಳೂರು : ಮಕ್ಕಳು ಸಣ್ಣ-ಪುಟ್ಟ ತಪ್ಪುಗಳನ್ನ ಮಾಡೋದು ಸಹಜ, ಆದ್ರೆ ವಿದ್ಯಾರ್ಥಿಗಳಿಗೆ  ತಿದ್ದಿ-ಬುದ್ದಿ ಹೇಳಬೇಕಿದ್ದ ಶಿಕ್ಷಕರೇ ರಕ್ಕಸರಂತೆ ವರ್ತಿಸಿದ್ರೆ ಎಷ್ಟು ಸರಿ? ಹೋಮ್​​ ವರ್ಕ್​ ಮಾಡಿಲ್ಲ ಅಂತ 4ನೇ ಕ್ಲಾಸ್​ ವಿದ್ಯಾರ್ಥಿಗೆ ಶಿಕ್ಷಕಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ನಂದಿನಿ ಲೇಔಟ್​​ನ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕನ ಮೈ ಮೇಲೆ ಬಾಸುಂಡೆ ಕಂಡು ಪೋಷಕರು ಆಘಾತಗೊಂಡಿದ್ದಾರೆ. ತಕ್ಷಣ ಶಿಕ್ಷಕಿಯ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಹೋಮ್​ ವರ್ಕ್​ ಮಾಡಿಲ್ಲ ಎಂದು ಹಲ್ಲೆ
ನಂದಿನಿ ಲೇಔಟ್​​ನಲ್ಲಿರುವ ವೀಣಾ ವಿದ್ಯಾಸಂಸ್ಥೆಯಲ್ಲಿ 4ನೇ ಕ್ಲಾಸ್​​ ಬಾಲಕನಿಗೆ ಶಿಕ್ಷಕಿ ಆಂಗ್ಲಿನ್ ಎಂಬುವವರು ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದು, ಮನಬಂದಂತೆ ಹಲ್ಲೆ ನಡೆಸಿದ್ದು ಎಷ್ಟು ಸರಿ ಎಂದು ಪೋಷಕರು ಶಾಲಾ ಆಡಳಿತದವರನ್ನ ಪ್ರಶ್ನೆ ಮಾಡಿದ್ದಾರೆ.
ಹಲ್ಲೆ ಬಳಿಕ ಬೆದರಿಕೆ ಹಾಕಿದ್ರಾ ಟೀಚರ್​?
ವೀಣಾ ಸ್ಕೂಲ್ ಟೀಚರ್ ಆಂಗ್ಲಿನ್ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಇದೇ ತಿಂಗಳ 10 ನೇ ತಾರೀಖಿನಂದು ಬಾಲಕನಿಗೆ ಥಳಿಸಿದ ಘಟನೆ ನಡೆದಿದೆ. ವಿದ್ಯಾರ್ಥಿಗೆ ಹೊಡೆದ ಬಳಿಕ ಹಲ್ಲೆ ವಿಚಾರವನ್ನ ಯಾರಿಗಾದ್ರೂ ತಿಳಿಸಿದ್ರೆ ಮತ್ತೆ ಹೊಡೆಯುವುದಾಗಿ ಶಿಕ್ಷಕಿ ಬೆದರಿಕೆ ಕೂಡ ಹಾಕಿದ್ರು ಎನ್ನಲಾಗ್ತಿದೆ.
ತಾಯಿ ಬಳಿ ಹಲ್ಲೆ ವಿಚಾರ ಹೇಳಿದ ಬಾಲಕ
ಹೀಗಾಗಿ ಬಾಲಕ ಹಲ್ಲೆ ವಿಚಾರವನ್ನ ತನ್ನ ಅಮ್ಮನಿಗೆ ಹೇಳದ ಮುಚ್ಚಿಟ್ಟಿದ್ದ. ಆದ್ರೆ ಮಗನ ಮೈ ಮೇಲಿನ ಗಾಯ ಕಂಡು ತಾಯಿ ಲಕ್ಷ್ಮಿ ಮಗನನ್ನ ವಿಚಾರಿಸಿದ್ದರಂತೆ. ಈ ವೇಳೆ ನಡೆದ ವಿಚಾರವನ್ನ ಬಾಲಕ ತನ್ನ ತಾಯಿಗೆ ತಿಳಿಸಿದ್ದಾನೆ.
ಶಿಕ್ಷಕಿ ಅಂಗ್ಲಿನಾ ಸಸ್ಪೆಂಡ್​
ಬಾಲಕನ ತಾಯಿ ಶಾಲೆಗೆ ತೆರಳಿ ಆಡಳಿತ ಮಂಡಳಿಯವರನ್ನ ಪ್ರಶ್ನೆ ಮಾಡಿದ್ದಾರೆ. ಮಗನ ಮೇಲೆ ಹಲ್ಲೆ ಮಾಡಿದ ಶಿಕ್ಷಕಿಯನ್ನ ಕೂಡ ತರಾಟೆಗೆ ತೆಗೆದುಕೊಂಡಿದ್ರು. ಬಳಿಕ ಶಾಲೆ ಆಡಳಿತ ಮಂಡಳಿ ಶಿಕ್ಷಕಿ ಆಂಗ್ಲಿನಾ ಅವರನ್ನ ಸಸ್ಪೆಂಡ್ ಮಾಡಿದೆ
ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲು
ಹಲ್ಲೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲೂ ಬಾಲಕಿ ತಾಯಿ ದೂರು ನೀಡಿದ್ದಾರೆ. ಶಿಕ್ಷಕಿ ಆಂಗ್ಲಿನಾ ಹಾಗೂ ವೀಣಾ ಶಾಲೆ ವಿರುದ್ಧ ಎಫ್ ಐ ಆರ್ ದಾಖಲಿಸಿದ ನಂದಿನಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. BNS ಸೆಕ್ಷನ್ 115, 351 ಜ್ಯುವೆನಲ್ ಜಸ್ಟೀಸ್ ಆಕ್ಟ್ ಅಡಿ ಕೇಸ್ ದಾಖಲಾಗಿದೆ.

Share This Article