Ad image

ಸಿ.ಜೆ. ರಾಯ್ ಆತ್ಮಹತ್ಯೆ: ಎಸ್‌ಐಟಿ ವರದಿ ಕಾದು ನೋಡೋಣ ಎಂದ ಗೃಹ ಸಚಿವ

Team SanjeMugilu
1 Min Read

ಬೆಂಗಳೂರು: ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಕುರಿತು ರಚಿಸಲಾಗಿರುವ ವಿಶೇಷ ತನಿಖಾ ತಂಡದ  ವರದಿ ಏನು ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಯ್ ಅವರಿಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದಿಂದ ಕಿರುಕುಳವಿತ್ತು ಎಂಬ ಅವರ ಆಪ್ತರ ಆರೋಪಗಳ ಕುರಿತು ಪ್ರತಿಕ್ರಿಯಿಸಿ, “ಈ ಪ್ರಕರಣದ ಬಗ್ಗೆ ಅನಗತ್ಯ ಊಹಾಪೋಹಗಳು ಆಗಬಾರದು ಎಂಬ ಕಾರಣದಿಂದಲೇ ತಕ್ಷಣ ಎಸ್‌ಐಟಿ ರಚನೆ ಮಾಡಲಾಗಿದೆ. ತನಿಖಾ ವರದಿ ಏನು ಹೇಳುತ್ತದೆ, ಯಾರ ಪಾತ್ರ ಏನು ಎಂಬುದು ಸ್ಪಷ್ಟವಾಗಬೇಕು” ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಎಸ್‌ಐಟಿ ತನಿಖೆ ಚುರುಕುಗೊಂಡಿದ್ದು, ರಾಯ್ ಅವರ ಕುಟುಂಬಸ್ಥರ ಹೇಳಿಕೆ ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ತನಿಖೆಯ ಭಾಗವಾಗಿ, ರಾಯ್ ಅವರು ದಿನನಿತ್ಯದ ಆಗುಹೋಗುಗಳನ್ನು ದಾಖಲಿಸುತ್ತಿದ್ದ ಡೈರಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಡೈರಿಯಲ್ಲಿ ಅವರ ನಿತ್ಯದ ಭೇಟಿಗಳು ಮತ್ತು ವ್ಯವಹಾರಿಕ ನಿರ್ಧಾರಗಳ ಕುರಿತು ಉಲ್ಲೇಖಗಳಿದ್ದು, ಆದರೆ ಇದನ್ನು ಡೆತ್ ನೋಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಡೈರಿಯಲ್ಲಿ ತಮ್ಮ ಸಾವಿಗೆ ನಿರ್ದಿಷ್ಟ ಕಾರಣ ಅಥವಾ ಅಂತಿಮ ಸಂದೇಶವನ್ನು ರಾಯ್ ಉಲ್ಲೇಖಿಸಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಇದನ್ನು ಸಾಮಾನ್ಯ ದಿನಚರಿಯ ದಾಖಲೆ ಎಂದು ಮಾತ್ರ ಪರಿಗಣಿಸಲಾಗಿದೆ.

ರಾಯ್ ಆತ್ಮಹತ್ಯೆಗೆ ಬಳಸಿದ ಪಿಸ್ತೂಲ್‌ನ್ನೂ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದು ಬೆಲ್ಜಿಯಮ್ ಮೇಡ್ ಸ್ಮಾರ್ಟ್ ಮಿನಿ ಸೌಂಡ್‌ಲೆಸ್ ಪಿಸ್ತೂಲ್ ಆಗಿದ್ದು, ಪ್ರಾಥಮಿಕವಾಗಿ ಪರವಾನಗಿ ಪಡೆದಿರುವುದಾಗಿ ತಿಳಿದು ಬಂದಿದೆ. ಪಿಸ್ತೂಲ್ ಹಾಗೂ ಬುಲೆಟ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ರಚಿಸಲಾದ ಎಸ್‌ಐಟಿ ತಂಡವನ್ನು ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಮುನ್ನಡೆಸುತ್ತಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಸಹಜ ಸಾವು ಪ್ರಕರಣವನ್ನು ಈಗ ಅಧಿಕೃತವಾಗಿ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ.

Share This Article