ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಬತ್ತನೇ ಕೇಂದ್ರ ಬಜೆಟ್‌ನಲ್ಲಿ ಗ್ಲೋಬಲ್ ಬಿಗ್ ಕ್ಯಾಟ್ ಅಲಯನ್ಸ್ ಯೋಜನೆ ಘೋಷಿಸಿದ ಬೆನ್ನಲ್ಲೇ, ಈ ವರ್ಷದ ಅಂತಾರಾಷ್ಟ್ರೀಯ ಹುಲಿ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲು ಸಿದ್ಧತೆಗಳು ಜೋರಾಗಿವೆ. ಈ ಮಹತ್ವದ ಕಾರ್ಯಕ್ರಮಕ್ಕೆ ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ.
5 ದಿನದ ಕಾರ್ಯಾಗಾರದಲ್ಲಿ 18 ದೇಶದ ಪ್ರತಿನಿಧಿಗಳು ಭಾಗಿ
ಫೆಬ್ರುವರಿ 9ರಿಂದ 13ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಸಂಯುಕ್ತವಾಗಿ ಆಯೋಜಿಸುತ್ತಿವೆ. ಇದು ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯಾಗಿದ್ದು, ದಕ್ಷಿಣ ಭಾರತದ ವನ್ಯಜೀವಿ ಸಂರಕ್ಷಣೆಯ ಕುರತು ಜಾಗತಿಕ ಗಮನ ಸೆಳೆಯುವ ಉದ್ದೇಶ ಹೊಂದಿದೆ.
18 ದೇಶಗಳ ಪ್ರತಿನಿಧಿಗಳು ಹಾಗೂ ದೇಶದ ಎಲ್ಲಾ ರಾಜ್ಯಗಳ ಅರಣ್ಯಾಧಿಕಾರಿಗಳು ಮೊದಲ ಎರಡು ದಿನ ಬಂಡೀಪುರದಲ್ಲಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದು, ಫೆಬ್ರುವರಿ 11 ಮತ್ತು 12ರಂದು ನಾಗರಹೊಳೆಯಲ್ಲಿ ಕಾರ್ಯಕ್ರಮ ಮುಂದುವರಿಯಲಿದೆ. 2023ರಲ್ಲಿ ಮೈಸೂರುನಲ್ಲಿ ಹುಲಿ ಗಣತಿ ವರದಿ ಬಿಡುಗಡೆ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಘೋಷಿಸಿದ್ದರು.
ಸಭೆಯಲ್ಲಿ ಏನೆಲ್ಲಾ ಚರ್ಚೆ?
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದ್ದು, ಚಿರತೆ, ಹಿಮ ಚಿರತೆ ಸೇರಿದಂತೆ ಬಿಗ್ ಕ್ಯಾಟ್‌ಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಂರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಕೆ, ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಸಹಕಾರ, ಮತ್ತು ಉತ್ತಮ ಕಾರ್ಯಪದ್ಧತಿಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದೊಂದಿಗೆ ಅರಣ್ಯ ನಿವಾಸಿಗಳ ಪುನರ್ವಸತಿ, ಹುಲಿ ವಾಸಸ್ಥಾನಗಳಲ್ಲಿ ಅಭಿವೃದ್ಧಿ ಯೋಜನೆಗಳ ನಿಯಂತ್ರಣ ಹಾಗೂ ಸ್ವತಂತ್ರ ವಿಮರ್ಶೆಗಳಿಗೆ ಅವಕಾಶ ನೀಡಬೇಕೆಂಬ ಅಭಿಪ್ರಾಯವೂ ತಜ್ಞರಿಂದ ವ್ಯಕ್ತವಾಗಿದೆ.
