ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಐಷಾರಾಮಿ ಜೀವನಶೈಲಿ, ದುಬಾರಿ ವಾಹನಗಳು ಮತ್ತು ಭವ್ಯ ಬದುಕಿನ ಕಾರಣಕ್ಕೆ ಸಿಜೆ ರಾಯ್ ಅವರನ್ನು ಹಲವರು ‘ಎರಡನೇ ವಿಜಯ್ ಮಲ್ಯ’ ಎಂದೇ ಕರೆಯುತ್ತಿದ್ದರು. ಆದರೆ ವಾಸ್ತವದಲ್ಲಿ ಅವರು ಕಳೆದ ಆರು ತಿಂಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಇದ್ದರು ಎಂಬುದು ಇದೀಗ ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ.
ಬ್ಯಾಂಕ್ ಸಾಲವಿಲ್ಲ: ಆದರೂ ನಷ್ಟ ಹೇಗೆ?
ಪೊಲೀಸ್ ಮೂಲಗಳ ಪ್ರಕಾರ, ಸಿಜೆ ರಾಯ್ ತಮ್ಮ ವ್ಯವಹಾರಕ್ಕಾಗಿ ಯಾವುದೇ ಬ್ಯಾಂಕ್ ಸಾಲ ಪಡೆದಿರಲಿಲ್ಲ. ಕರ್ನಾಟಕ, ಕೇರಳ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅವರ ವ್ಯವಹಾರ ವಿಸ್ತಾರಗೊಂಡಿತ್ತು. ಆದರೆ ಹೊಸ ಪ್ರಾಜೆಕ್ಟ್‌ಗಳಿಗೆ ಬ್ಯಾಂಕ್ ಹಣದ ಬದಲು ಕೆಲವು ರಾಜಕಾರಣಿಗಳಿಂದಲೇ ಹೂಡಿಕೆ ಬಂದಿತ್ತು. ಆ ಹಣದಲ್ಲಿ ಬಹುಪಾಲು ಅಕ್ರಮ ಹಣ (ಬ್ಲ್ಯಾಕ್ ಮನಿ) ಆಗಿರಬಹುದೆಂಬ ಅನುಮಾನವೂ ತನಿಖಾ ಸಂಸ್ಥೆಗಳಿಗೆ ಮೂಡಿತ್ತು ಎನ್ನಲಾಗಿದೆ.
ಆದರೆ ರಾಯ್ ಕೈಗೊಂಡ ಹೊಸ ಯೋಜನೆಗಳು ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಇತ್ತ ಬಂದ ಆದಾಯದ ದೊಡ್ಡ ಭಾಗವನ್ನು ಅವರು ಐಷಾರಾಮಿ ಜೀವನಶೈಲಿಗೆ ಖರ್ಚು ಮಾಡುತ್ತಿದ್ದರು. ಪರಿಣಾಮವಾಗಿ ಹಣಕಾಸು ನಿರ್ವಹಣೆಯಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ರಾಜಕಾರಣಿಗಳಿಂದ ಹಣ ವಾಪಸ್ ಒತ್ತಡ, ಏಜೆನ್ಸಿಗಳ ತನಿಖೆಯಿಂದ ಕುಗ್ಗಿದ್ದ ಉದ್ಯಮಿ?
ಪ್ರಾಜೆಕ್ಟ್‌ಗಳು ನಷ್ಟಕ್ಕೆ ತಿರುಗುತ್ತಿದ್ದಂತೆಯೇ, ಹೂಡಿಕೆ ಮಾಡಿದ ಕೆಲ ರಾಜಕಾರಣಿಗಳು ಹಣ ವಾಪಸ್ ಕೇಳತೊಡಗಿದ್ದರು. ಇದರ ನಡುವೆ ಕೇಂದ್ರ ತನಿಖಾ ಸಂಸ್ಥೆಗಳು ಸಿಜೆರಾಯ್ ಅವರ ವ್ಯವಹಾರಗಳತ್ತ ಗಮನಹರಿಸಿದ್ದವು. ಬ್ಯಾಂಕ್ ಸಾಲವಿಲ್ಲದೆ ಇಷ್ಟು ದೊಡ್ಡ ಮಟ್ಟದ ವ್ಯವಹಾರಕ್ಕೆ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಯೇ ತನಿಖೆಯ ಮೂಲವಾಗಿತ್ತು.
ಒಂದೆಡೆ ಹಣ ಹೂಡಿದವರ ಒತ್ತಡ, ಮತ್ತೊಂದೆಡೆ ಆದಾಯ ತೆರಿಗೆ ಹಾಗೂ ಇತರೆ ಏಜೆನ್ಸಿಗಳ ಪ್ರಶ್ನೆಗಳು, ಇವೆಲ್ಲದಕ್ಕೂ ಉತ್ತರ ನೀಡಲು ಸಾಧ್ಯವಾಗದೆ ಸಿಜೆ ರಾಯ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಮಾನಸಿಕ ಒತ್ತಡ ಹಾಗೂ ಖಿನ್ನತೆ
ಆರ್ಥಿಕವಾಗಿ ಸಂಪೂರ್ಣ ಕುಸಿತ ಕಂಡಿದ್ದ ರಾಯ್, ಮಾನಸಿಕವಾಗಿ ಕೂಡ ಕುಗ್ಗಿಹೋಗಿದ್ದರು. ಕಳೆದ ಕೆಲ ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು. ತನಿಖೆಯಿಂದ ತಮ್ಮ ವ್ಯವಹಾರಗಳ ಎಲ್ಲಾ ಅಂಶಗಳು ಬಹಿರಂಗವಾಗುತ್ತವೆ ಎಂಬ ಭಯವೂ ಅವರನ್ನು ಕಾಡತೊಡಗಿತ್ತು. ಈ ಎಲ್ಲಾ ಒತ್ತಡಗಳು ಒಂದೇ ಸಮಯದಲ್ಲಿ ಎದುರಾದ ಪರಿಣಾಮ ಅವರು ಆತ್ಮಹತ್ಯೆಯ ಕಠಿಣ ನಿರ್ಧಾರಕ್ಕೆ ಬಂದಿರಬಹುದೆಂದು ಪೊಲೀಸ್ ಮೂಲಗಳು ಶಂಕಿಸಿವೆ. ಸದ್ಯ, ಆತ್ಮಹತ್ಯೆ ಹಿಂದಿನ ನಿಖರ ಕಾರಣಗಳನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
