ಸಾಮಾಜಿಕ ಅಸಮಾನತೆ ಹಾಗೂ ಜಾತಿ ಶೋಷಣೆ ವಿಷಯವಿರುವ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಜನವರಿ 23ರಂದು ರಿಲೀಸ್ ಆಗಿದೆ. ವಿಮರ್ಶಕರಿಂದ ಈ ಚಿತ್ರ ಮೆಚ್ಚುಗೆ ಪಡೆದಿದೆ. ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಇದರಿಂದ ಚಿತ್ರಕ್ಕೆ ಮತ್ತಷ್ಟು ಬೆಂಬಲ ಸಿಕ್ಕಂತೆ ಆಗಿದ್ದು, ಹೆಚ್ಚು ಜನರನ್ನು ತಲುಪಲು ಈ ಬೆಳವಣಿಗೆ ಸಹಕಾರಿ ಆಗಲಿದೆ.
‘ಲ್ಯಾಂಡ್ಲಾರ್ಡ್ 70ರ ದಶಕದ ಕಥೆ ಹೊಂದಿದೆ. ರಾಚಯ್ಯ (ದುನಿಯಾ ವಿಜಯ್), ನಿಂಗವ್ವ (ರಚಿತಾ ರಾಮ್) ಮಗಳು ಭಾಗ್ಯಾ (ರಿತನ್ಯಾ ರಾಮ್) ಜೊತೆ ಹಾಯಾಗಿ ಜೀವನ ನಡೆಸುತ್ತಿರುತ್ತಾರೆ. ಆ ಊರಿನಲ್ಲಿ ಸಣ್ಣ ಧಣಿ (ರಾಜ ಬಿ. ಶೆಟ್ಟಿ) ಪಾರುಪತ್ಯ. ಆತ ಹೇಳಿದಂತೆ ನಡೆಯಬೇಕು. ಯಾರ ಬಳಿಯೂ ಜಮೀನು ಇರಬಾರದು ಎಂಬುದು ಆತನ ಆಜ್ಞೆ. ತಾವೇ ಬೆಳೆದ ಬೆಳೆಯಲ್ಲಿ ಸಿಗೋದು ಒಂದು ಹಿಡಿ ಮಾತ್ರ. ಇದನ್ನು ಪ್ರಶ್ನಿಸಿದ ಭಾಗ್ಯಾಳ ಪ್ರಿಯಕರನ ಸುಟ್ಟು ಕೊಲ್ಲಲಾಗುತ್ತದೆ. ಈ ಅಸಮಾನತೆ ವಿರುದ್ಧ ರಾಚಯ್ಯ ಸಿಡಿದೇಳುತ್ತಾರೆ. ಈ ರೀತಿಯಲ್ಲಿ ಸಿನಿಮಾ ಇದೆ.
‘ಲ್ಯಾಂಡ್ಲಾರ್ಡ್’ ಚಿತ್ರವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ. ಈ ಮೊದಲು ವಿಜಯ್ ಹಾಗೂ ಜಡೇಶ್ ಕುಮಾರ್ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತೆರಿಗೆ ವಿನಾಯಿತಿ ಕೊಡುವಂತೆ ಮನವಿ ಮಾಡಿದ್ದರು. ಈ ವೇಳೆ ಸಿನಿಮಾ ನೋಡದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗ ಸಂಬಂಧಪಟ್ಟ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ನೀಡಲು ಸೂಚನೆ ಸಿದ್ದರಾಮಯ್ಯ ನೀಡಿದ್ದಾರೆ. ತೆರಿಗೆ ವಿನಾಯಿತಿ ಸಿಗುವುದರಿಂದ ಟಿಕೆಟ್ ದರ ಕಡಿಮೆ ಆಗಲಿದೆ.
‘ಲ್ಯಾಂಡ್ಲಾರ್ಡ್’ ಸಿನಿಮಾ ಜನವರಿ 23ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಬುಕ್ ಮೈ ಶೋನನಲ್ಲಿ ಸುಮಾರು ಮೂರು ಸಾವಿರ ಜನ ರೇಟಿಂಗ್ ನೀಡಿದ್ದು, 9.4/10 ಸಿಕ್ಕಿದೆ. ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ನಟನೆಯನ್ನು ಕೊಂಡಾಡಿದ್ದಾರೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಮಗಳು ರಿತನ್ಯ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ ಎಂಬುದು ವಿಶೇಷ.
