Ad image

ಸರ್ಕಾರದ ವಿರುದ್ಧ ಹೋರಾಟಕ್ಕೆ ಸಾರಿಗೆ ನೌಕರರ ದಿನಾಂಕ ಫಿಕ್ಸ್‌; ಮತ್ತೆ ಬಂದ್‌ ಆಗುತ್ತಾ ಬಸ್‌?

Team SanjeMugilu
3 Min Read

ಕರ್ನಾಟಕದ ನಾಲ್ಕು ರಸ್ತೆ ಸಾರಿಗೆ ನಿಗಮಗಳ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ) ನೌಕರರು ಸರ್ಕಾರದ ವಿರುದ್ಧ ಮತ್ತೆ ಧ್ವನಿ ಎತ್ತಿದ್ದಾರೆ. ಜಂಟಿ ಕ್ರಿಯಾ ಸಮಿತಿ (ಜೆಎಸಿ) ನೇತೃತ್ವದಲ್ಲಿ ಮತ್ತೆ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಹಿಂದೆ ಕಳೆದ ತಿಂಗಳು ಪ್ರತಿಭಟನೆಗೆ ಕರೆ ನೀಡಿದ್ದ ನೌಕರರು ಮತ್ತೆ ಇದೀಗ ಈ ತಿಂಗಳಲ್ಲೇ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಜೊತೆಗೆ ಆ ಸಾರಿಗೆ ಬಂದ್ ಮಾಡುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಈ ಹಿಂದೆ ಜನವರಿ 29ರಂದು ನಿಗದಿಯಾಗಿದ್ದ ಹೋರಾಟವನ್ನು ಎಚ್.ವಿ. ಅನಂತ್ ಸುಬ್ಬರಾವ್ ಅವರ ನಿಧನದಿಂದಾಗಿ ಮುಂದೂಡಲಾಗಿತ್ತು. ಈಗ ಫೆಬ್ರವರಿಯ ಮೂರನೇ ವಾರದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಕರೆ ನೀಡಿದ್ದಾರೆ.
ನೌಕರರ ಮುಖ್ಯ ಬೇಡಿಕೆಗಳು ಈಡೇರಿದಿದ್ದರೆ ಬಸ್‌ ಬಂದ್‌ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಅವರಿಗೆ 38 ತಿಂಗಳ ವೇತನ ಹಿಂಬಾಕಿ ಮತ್ತು 2024 ಜನವರಿ 1ರಿಂದ ಹೊಸ ವೇತನ ಪರಿಷ್ಕರಣೆ ಜಾರಿ. ಇದರ ಜೊತೆಗೆ ಇತರ ಸೇವಾ ಸಂಬಂಧಿತ ಬೇಡಿಕೆಗಳೂ ಇವೆ. ಸರ್ಕಾರದೊಂದಿಗೆ ಹಲವು ಸುತ್ತು ಚರ್ಚೆ ನಡೆದರೂ ಯಾವುದೇ ಪ್ರಗತಿ ಆಗಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ. ಇದೀಗ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಪತ್ರ ಬರೆದು ಅಂತಿಮ ಎಚ್ಚರಿಕೆ ನೀಡಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿ 19ರಂದು ರಾಜ್ಯಾದ್ಯಂತ ಸಾರಿಗೆ ಸೇವೆ ಸ್ಥಗಿತಗೊಳಿಸುವುದು ಸೇರಿದಂತೆ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಲಾಗಿದೆ.
ಕಳೆದ ತಿಂಗಳು ಮಾಡಬೇಕಿದ್ದ ಬೆಂಗಳೂರು ಚಲೋ ಮುಂದೂಡಲಾಗಿತ್ತು!
ಜನವರಿ ಅಂತ್ಯದಲ್ಲಿ ನಿಗದಿಯಾಗಿದ್ದ ‘ಬೆಂಗಳೂರು ಚಲೋ’ ಪ್ರತಿಭಟನೆಯನ್ನು ಅನಂತ್ ಸುಬ್ಬರಾವ್ ಅವರ ನಿಧನದಿಂದಾಗಿ ತಡೆಹಿಡಿಯಲಾಗಿತ್ತು. ಅವರು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಫೆಡರೇಶನ್‌ನ ಅಧ್ಯಕ್ಷರಾಗಿದ್ದರು. ದಶಕಗಳ ಕಾಲ ಸಾರಿಗೆ ನೌಕರರ ಹೋರಾಟಗಳಲ್ಲಿ ನೇತೃತ್ವ ವಹಿಸಿದ್ದರು. ಅವರ ನಿಧನದ ನಂತರ ಸಂಘಟನೆಗಳು ಶೋಕ ಸೂಚಿಸಿ ಹೋರಾಟವನ್ನು ಮುಂದೂಡಿದ್ದವು. ಈಗ ಮತ್ತೆ ಸಕ್ರಿಯಗೊಂಡು ಫೆಬ್ರವರಿ 19ರಂದು ಫ್ರೀಡಂ ಪಾರ್ಕ್‌ನಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ. ಸಾವಿರಾರು ನೌಕರರು ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿಗೆ ಆಗಮಿಸಿ ಭಾಗವಹಿಸುವ ನಿರೀಕ್ಷೆ ಇದೆ.
ಈ ಹೋರಾಟದಿಂದ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ದೊಡ್ಡ ವ್ಯತ್ಯಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣಿಕರು ತೊಂದರೆಗೊಳಗಾಗಬಹುದು. ಮುಖ್ಯವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇವೆ ಸ್ಥಗಿತಗೊಳ್ಳಬಹುದು. ಸರ್ಕಾರ ಬೇಡಿಕೆಗಳನ್ನು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರಿಗೆ ಬಂದ್‌ಗೆ ಮುಂದಾಗುವುದಾಗಿ ಜಂಟಿ ಕ್ರಿಯಾ ಸಮಿತಿ ಹೇಳಿದೆ.
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಧ್ವನಿ!
ಸಾರಿಗೆ ನೌಕರರು ದೀರ್ಘಕಾಲದಿಂದ ಈ ಬೇಡಿಕೆಗಳನ್ನು ಎತ್ತುತ್ತಿದ್ದಾರೆ. 2020ರಿಂದ 2023ರವರೆಗಿನ 38 ತಿಂಗಳ ಹಿಂಬಾಕಿ ಮತ್ತು ಹೊಸ ವೇತನ ಶ್ರೇಣಿ ಜಾರಿ ಮಾಡದಿದ್ದರಿಂದ ಅವರು ಆರ್ಥಿಕ ತೊಂದರೆಗೊಳಗಾಗಿದ್ದಾರೆ. ಹಲವು ಬಾರಿ ಸರ್ಕಾರದೊಂದಿಗೆ ಸಭೆ ನಡೆದರೂ ಫಲಿತಾಂಶ ಬಂದಿಲ್ಲ. ಇದೀಗ ಜಂಟಿ ಕ್ರಿಯಾ ಸಮಿತಿ ತೀವ್ರ ನಿಲುವು ತೆಗೆದುಕೊಂಡಿದೆ. ನೌಕರರ ಪರವಾಗಿ ಹೋರಾಟ ಮಾಡುವುದು ಅವರ ಹಕ್ಕು ಎಂದು ಸಂಘಟನೆಗಳು ಹೇಳುತ್ತಿವೆ.
ಈ ಹಿಂದೆಯೂ ಸಾರಿಗೆ ನೌಕರರು ಹಲವು ಬಾರಿ ಮುಷ್ಕರ ಮಾಡಿದ್ದರು. ಆಗ ಪ್ರಯಾಣಿಕರು ದೊಡ್ಡ ತೊಂದರೆಗೊಳಗಾಗಿದ್ದರು. ಈಗಲೂ ಅದೇ ಸ್ಥಿತಿ ಉಂಟಾಗಬಹುದು. ಸರ್ಕಾರ ಈ ಬೇಡಿಕೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಪರಿಹಾರ ನೀಡಬೇಕು ಎಂಬ ನಿರೀಕ್ಷೆ ಇದೆ. ಇಲ್ಲದಿದ್ದರೆ ಫೆಬ್ರವರಿ 19ರಂದು ರಾಜ್ಯದ ಸಾರಿಗೆ ವ್ಯವಸ್ಥೆ ಸ್ತಬ್ಧಗೊಳ್ಳುವ ಸಾಧ್ಯತೆ ಹೆಚ್ಚಿದೆ. ನೌಕರರ ಹೋರಾಟ ಯಶಸ್ವಿಯಾಗಿ ಅವರ ಬೇಡಿಕೆಗಳು ಈಡೇರಬೇಕು ಎಂಬುದು ಅನೇಕರ ಆಸೆ. ಆದರೆ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಆಗದಂತೆ ಎರಡೂ ಕಡೆಯಿಂದ ಸಂವಾದ ನಡೆಸಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು.

Share This Article