ಬೆಂಗಳೂರು: “ರಾಜಧಾನಿಯ ಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆ” ಎಂಬ ಖ್ಯಾತಿಗೆ ಪಾತ್ರವಾಗಿರುವ ಸಿಲ್ಕ್‌ಬೋರ್ಡ್ ಜಂಕ್ಷನ್‌ನ ಫ್ಲೈಓವರ್ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ಸಂಚಾರ ಸಿಕ್ಕಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಈ ಮಹತ್ವದ ಯೋಜನೆಯನ್ನು ರೂಪಿಸಲಾಗಿದೆ.
ಸುಮಾರು 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಡಬಲ್ ಡೆಕ್ಕರ್ ಫ್ಲೈಓವರ್, ಸೆಂಟ್ರಲ್ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಬಿಟಿಎಂ ಲೇಔಟ್, ಎಚ್ಎಸ್ಆರ್ ಲೇಔಟ್ ಹಾಗೂ ಬೆಳ್ಳಂದೂರು ಕಡೆ ಸಂಚರಿಸುವ ವಾಹನಗಳಿಗೆ ದೊಡ್ಡ ಮಟ್ಟದ ನೆರವಾಗಲಿದೆ. ಈಗಾಗಲೇ 2024ರಲ್ಲಿ ಮೇಲ್ಸೇತುವೆಯ ಒಂದು ಬದಿಯನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗಿತ್ತು. ಆದರೆ ಅಸ್ತಿತ್ವದಲ್ಲಿರುವ ರಸ್ತೆ ಮಾರ್ಗದ ಮೇಲೆ 42 ಮೀಟರ್ ಉಕ್ಕಿನ ಸೇತುವೆ ಅಳವಡಿಸುವ ತಾಂತ್ರಿಕ ಸವಾಲುಗಳಿಂದ ಒಂದು ಭಾಗದ ಕಾಮಗಾರಿ ವಿಳಂಬವಾಗಿತ್ತು.
ಪ್ರಸ್ತುತ ಕಾರ್ಮಿಕರು ಕಾಂಕ್ರೀಟ್ ಚಪ್ಪಡಿ ಹಾಕುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದು, ಬಹುತೇಕ ಸಿವಿಲ್ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಅಧಿಕಾರಿಗಳು ಫೆಬ್ರವರಿ ಅಂತ್ಯದೊಳಗೆ ಎಲ್ಲ ಕಾಮಗಾರಿಗಳನ್ನು ಮುಗಿಸುವ ಗುರಿ ಹೊಂದಿದ್ದಾರೆ. ಗುತ್ತಿಗೆದಾರರು ಅಂತಿಮ ಸ್ಪರ್ಶ ನೀಡಿದ ಬಳಿಕ, ಸಂಚಾರ ಪೊಲೀಸರು ಹಾಗೂ ತಾಂತ್ರಿಕ ತಜ್ಞರು ಸುರಕ್ಷತಾ ಪರಿಶೀಲನೆ ನಡೆಸಲಿದ್ದಾರೆ.
ಎಚ್ಎಸ್ಆರ್ ಲೇಔಟ್ ಮತ್ತು ಬಿಟಿಎಂ ಲೇಔಟ್ ಸಂಪರ್ಕಿಸುವ ಈ ಮೇಲ್ಸೇತುವೆ ಕಾರ್ಯಾರಂಭಗೊಂಡರೆ, ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ದಿನನಿತ್ಯ ಎದುರಾಗುವ ಭಾರೀ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಉದ್ಘಾಟನಾ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದ್ದು, ನಗರಗಳಿಗೆ ಇದು ಬಹುಕಾಲದ ನಿರೀಕ್ಷಿತ ಯೋಜನೆಯಾಗಿದೆ.
