ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಒಂದೆಡೆ ಕುರ್ಚಿ ಕದನ ನಡೆಯುತ್ತಿದ್ದರೆ, ಮತ್ತೊಂದೆಡೆ ಹಸ್ತಕ್ಷೇಪದ ಜಟಾಪಟಿ ಜೋರಾಗಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಆಡಿದ ಮಾತು, ಅವರ ನಡೆ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ತರುತ್ತಿದೆ ಎನ್ನಲಾಗಿದೆ. ಇಂಧನ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪ ಮಾಡಿದ್ದರು ಎಂದು ಇತ್ತೀಚೆಗಷ್ಟೇ ಸಚಿವ ಕೆಜೆ ಜಾರ್ಜ್ ರಾಜೀನಾಮೆ ಕೊಡಲು ಮುಂದಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಬಳಿಕ, ‘ಅಪ್ಪಾಜಿಯೇ ಐದು ವರ್ಷ ಸಿಎಂ’ ಎನ್ನುವ ಮೂಲಕ ಯತೀಂದ್ರ ನಾಯಕತ್ವ ಬದಲಾವಣೆ ಚರ್ಚೆಯ ಬೆಂಕಿಗೆ ತುಪ್ಪ ಸುರಿದಿದ್ದರು. ಈಗ ಸಿಎಂ ತವರು ಜಿಲ್ಲೆ ಕಾಂಗ್ರೆಸ್ ನಾಯಕರೇ ಯತೀಂದ್ರ ವಿರುದ್ಧ ಅಸಮಾಧಾನ ಗೊಂಡಿದ್ದಾರೆ.
ಹಸ್ತಕ್ಷೇಪದ ಆರೋಪವಷ್ಟೇ ಅಲ್ಲ, ಸಿಎಂ ಬದಲಾವಣೆ ವಿಚಾರವಾಗಿ ಯತೀಂದ್ರ ನೀಡಿರುವ ಹೇಳಿಕೆ ಬಗ್ಗೆಯೂ ತಿವಿದಿರುವ ತನ್ವೀರ್ ಸೇಠ್, ಅಧಿಕಾರ ಶಾಶ್ವತವಲ್ಲ ಎಂದಿದ್ದಾರೆ. ಏತನ್ಮಧ್ಯೆ, ಯಾರೋ ಹೇಳಿಕೆ ಕೊಟ್ಟರೆ ಸಿಎಂ ಬದಲಾವಣೆ ಆಗಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರೆ, ಹೈಕಮಾಂಡ್ ಎಲ್ಲವನ್ನೂ ಗಮನಿಸ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಮಧ್ಯೆ ವಿಜಯಪುರದಲ್ಲಿ ಲಿಂಗಾಯತ ಶಾಸಕರ ಭೋಜನಕೂಟದ ಬಳಿಕ ಮಾತನಾಡಿದ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ನಮ್ಮ ಸಮುದಾಯದ ಹಿತಾಸಕ್ತಿ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು 34 ಶಾಸಕರಿದ್ದೇವೆ, ನಮಗೆ ಸಿಗಬೇಕಾಗಿರುವುದು ಸಿಗಲೇಬೇಕು ಎಂದಿದ್ದಾರೆ.
ಕಾಂಗ್ರೆಸ್ನ ನಾಯಕತ್ವ ಬಡಿದಾಟವೇ ವಿಪಕ್ಷಕ್ಕೆ ಅಸ್ತ್ರವಾಗಿದ್ದು, ಕೇಂದ್ರ ಸಚಿವರು ಟೀಕಿಸಿದ್ದಾರೆ. ಈಗಿರುವ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂದು ಸಚಿವ ವಿ ಸೋಮಣ್ಣ ಕುಟುಕಿದ್ದಾರೆ. ನಾಯಕತ್ವ ಬದಲಾವಣೆ ಸಂಘರ್ಷ ಮುಂದೆ ಮತ್ತೆ ಯಾವ ಹಂತ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.
