Ad image

ಹಾರಾಡುತ್ತಿದ್ದಾಗ ಇಂಧನ ಖಾಲಿಯಾಗಿದ್ದು ಹೇಗೆ? – ವಿಮಾನ ಪತನದ ಬಗ್ಗೆ ಮೂಡಿವೆ ಅನುಮಾನ

Team SanjeMugilu
2 Min Read

ವಿಜಯಪುರ: ಪರಿಶೀಲನೆಯ ಬಳಿಕವೂ ತರಬೇತಿ ವಿಮಾನದಲ್ಲಿ  ಇಂಧನ ಖಾಲಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಬಬಲೇಶ್ವರ ತಾಲೂಕಿನ ಮಂಗಳೂರು  ಗ್ರಾಮದ ಬಳಿ ಭಾನುವಾರ ಮಧ್ಯಾಹ್ನ ಪೈಲಟ್ ತರಬೇತಿಗೆ ಬಳಸುವ ಲಘು ವಿಮಾನ ಪತನವಾಗಿತ್ತು. ಎಸ್‌ಪಿ ಲಕ್ಷ್ಮಣ್‌ ನಿಂಬರಗಿ ಸೇರಿದಂತೆ ಪೋಲಿಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಸ್ಥೆಯ ಮುಖ್ಯಸ್ಥರು ಸ್ಥಳಕ್ಕೆ ಆಗಮಿಸಿ ಪತನದ ಬಗ್ಗೆ ಮಾಹಿತಿ ಪಡೆದಿದ್ದಾರೆ.  ಪೈಲಟ್ ಕುನಾಲ್ ಪ್ರತಿಕ್ರಿಯಿಸಿ, ಇಂಧನ ಖಾಲಿಯಾದ  ಕಾರಣ ವಿಮಾನ ಪತನವಾಗಿದೆ ಎಂದು ಹೇಳಿದ್ದಾರೆ.

ಯಾವುದೇ ವಿಮಾನ ಹಾರಾಟ ಆರಂಭಿಸುವ ಮೊದಲು ಇಂಧನ ಮಟ್ಟವನ್ನು ಪರಿಶೀಲನೆ ಮಾಡಲಾಗುತ್ತದೆ. ಹಾರಾಟ ಆರಂಭಿಸುವ ಸ್ಥಳದಿಂದ ಲ್ಯಾಂಡಿಗ್‌ ಆಗುವ ಸ್ಥಳಕ್ಕೆ ಎಷ್ಟು ದೂರವಿದೆ? ಆ ಸ್ಥಳವನ್ನು ತಲುಪಲು ಇಂಧನ ಪ್ರಮಾಣ ಎಷ್ಟು ಬೇಕು ಎಂಬುದನ್ನು ಪರಿಶೀಲಿಸಿ ವಿಮಾನ ಟೇಕಾಫ್‌ಗೆ ಅನುಮತಿ ನೀಡಲಾಗುತ್ತದೆ. ಆದರೆ ಈ ವಿಮಾನ ಕಲಬುರಗಿಯಿಂದ ಬೆಳಗಾವಿಗೆ ಹೋಗುವಾಗ ದಾರಿ ಮಧ್ಯೆ ಪತನವಾಗಿದೆ. ಹಾಗಿದ್ದಾಗ ವಿಮಾನ ಟೇಕಾಫ್‌ ಆಗುವ ಮೊದಲು ಪರಿಶೀಲನೆ ಮಾಡಲಿಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ಪರಿಶೀಲನೆ ಮಾಡಿದ್ದಾಗ ನಿಗದಿತ ಪ್ರಮಾಣದ ಇಂಧನ ಇದ್ದರೆ ವಿಮಾನ ಪತನವಾಗಿದ್ದು ಹೇಗೆ ಎಂಬ ಗಂಭೀರವಾದ ಪ್ರಶ್ನೆ ಎದ್ದಿದೆ.

ವಿಮಾನ ರೈತರ ಕೃಷಿ ಭೂಮಿಯ ಮೇಲೆ ಬಿದ್ದ ಕಾರಣ ಯಾವುದೇ ದೊಡ್ಡ ದುರಂತ ಸಂಭವಿಸಿಲ್ಲ. ಒಂದು ವೇಳೆ ನಿಯಂತ್ರಣ ತಪ್ಪಿ ಜನವಸತಿ ಪ್ರದೇಶದ ಮೇಲೆ ಬಿದ್ದಿದ್ದರೂ ಭಾರೀ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು. ಹೀಗಾಗಿ ಇಂಧನ ಕಡಿಮೆಯಾದ ಬಗ್ಗೆ ಅನುಮಾನ ಎದ್ದಿದ್ದು ತನಿಖೆಯ ನಂತರ ವಿಮಾನ ಪತನದ ಬಗ್ಗೆ ಸತ್ಯಾಸತ್ಯತೆ ಪ್ರಕಟವಾಗಲಿದೆ.

ಏನಿದು ಘಟನೆ?
ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಆರ್‌ಎಫ್‌ಟಿಎ ಸಂಸ್ಥೆಯ ತರಬೇತಿ ವಿಮಾನ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಕಬ್ಬಿನ ಜಮೀನಲ್ಲಿ ಏಕಾಏಕಿ ಬಿದ್ದಿತ್ತು. ವಿಮಾನದಲ್ಲಿ ತರಬೇತುದಾರ ಪೈಲಟ್ ಕುನಾಲ್ ಹಾಗೂ ಟ್ರೈನಿ ಪೈಲಟ್ ಗೌತಮ್ ಇಬ್ಬರು ಪ್ರಯಾಣಿಸುತ್ತಿದ್ದರು. ಇಬ್ಬರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಬ್ಧ ಕೇಳಿ ರೈತರು ಹಾಗೂ ಗ್ರಾಮಸ್ಥರು ದೌಡಾಯಿಸಿ ಇಬ್ಬರನ್ನು ವಿಮಾನದಿಂದ ಹೊರ ತೆಗೆದಿದ್ದಾರೆ. ಬಿದ್ದ ರಭಸಕ್ಕೆ ವಿಮಾನದ ಮುಂಭಾಗ ಮುರಿದು ಎರಡು ತುಂಡಾಗಿದೆ. ಅಂಬುಲೆನ್ಸ್‌ ಬರಲು ತಡವಾಗಿದ್ದರಿಂದ ಸ್ಥಳೀಯರೇ ಕಾರಿನಲ್ಲಿ ಇಬ್ಬರನ್ನು ಕರೆದುಕೊಂಡು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

Share This Article