Ad image

ಹಿಂದಿನ ಬಿಜೆಪಿಗಿಂತ ಹಾಲಿ ಕಾಂಗ್ರೆಸ್​​ ಸರ್ಕಾರದಲ್ಲೇ ಭ್ರಷ್ಟಾಚಾರ ಹೆಚ್ಚು: ಗುತ್ತಿಗೆದಾರರ ಸಂಘದ ಆರೋಪ

Team SanjeMugilu
2 Min Read

ಮಡಿಕೇರಿ: ಹಿಂದಿನ ಬಿಜೆಪಿ ಸರ್ಕಾರದ ಅವಧಿಗಿಂತ ಹಾಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್​​ ನೇತೃತ್ವದ ಸರ್ಕಾರದಲ್ಲಿಯೇ ಭ್ರಷ್ಟಾಚಾರ ಹೆಚ್ಚಾಗಿ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಹೋರಾಟದ ಫಲವಾಗಿ ಸಿದ್ದರಾಮಯ್ಯ ಸಿಎಂ ಆಗಿದ್ದು, ಕೆಂಪಣ್ಣ ನೇತೃತ್ವದಲ್ಲಿ ಹೋರಾಟ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಹೀಗಿದ್ದರೂ ನಮಗೆ ಸರಕಾರದಿಂದ ಯಾವುದೇ ರೀತಿಯ ಸಹಕಾರ ಇಲ್ಲ. ಇದುವರೆಗೂ ನಮ್ಮನ್ನು ಸಿಎಂ ಸೌಜನ್ಯಕ್ಕೂ ಕರೆದು ಮಾತಾಡಿಸಿಲ್ಲ ಎಂದು ದೂರಿದ್ದಾರೆ.

ಮಾರ್ಚ್ 5ರಂದು ಪ್ರತಿಭಟನೆಗೆ ಕರೆ
ರಾಜ್ಯದಲ್ಲಿ 37 ಸಾವಿರ ಕೋಟಿ ಬಿಲ್​​ ಪೆಂಡಿಂಗ್​​ ಇದ್ದು, ಕೊಡಗು ಜಿಲ್ಲೆಯಲ್ಲಿ 180 ಕೋಟಿ ರೂ. ಬಾಕಿ ಇದೆ. ಈ ಸಂಬಂಧ ಎಲ್ಲ ಜಿಲ್ಲೆಗೆ ತೆರಳಿ ಗುತ್ತಿಗೆದಾರರಿಗೆ ಸಾಂತ್ವಾನ ಹೇಳಲಾಗುತ್ತಿದ್ದು, ಮುಖ್ಯ ಕಾರ್ಯದರ್ಶಿಗೆ ನೂರು ಪುಟಗಳ ಪತ್ರ ಬರೆಯಲಾಗಿದೆ. ಲೋಕೋಪಯೋಗಿ ಸಚಿವರೂ ನಮಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಮಾರ್ಚ್ 5ರಂದು ಕೆಲಸ ನಿಲ್ಲಿಸಿ ಫ್ರೀಡಂ ಪಾರ್ಕ್​​ನಲ್ಲಿ ಬೃಹತ್ ಮುಷ್ಕರ ನಡೆಸಲಾಗುತ್ತೆ.ಇದಕ್ಕೂ ಸ್ಪಂದಿಸದಿದ್ದಲ್ಲಿ ಮುಂದೆ ಒಂದು ವಾರ ಕೆಲಸ ಸ್ಥಗಿತ ಮಾಡುತ್ತೇವೆ ಎಂದು ಆರ್.ಮಂಜುನಾಥ್ ತಿಳಿಸಿದ್ದಾರೆ.

ಖಾಸಗಿ ವ್ಯಕ್ತಿಗಳು ಸಚಿವರ ಬಳಿ ಹೋಗಿ ಕೆಲಸ ಮಾಡಿಸುತ್ತಿದ್ದು. ಇಂತಹ ವ್ಯವಸ್ಥೆಯನ್ನು ಇಲ್ಲಿಯವರೆಗೆ ನಾವು ನೋಡಿಲ್ಲ. ಮುತ್ಸದಿ ಸಿಎಂ ಸಿದ್ದರಾಮಯ್ಯ ಈ ರೀತಿ ಮಾಡೋದು ಸರಿಯಲ್ಲ. ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. ನಾವು ದುಡ್ಡು ತಗೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಅವರು ಅದೆಲ್ಲಾ ಮರೆತು ಹೋಗಿದ್ದಾರೆ. ಹಳೆ ಸರ್ಕಾರಕ್ಕಿಂತ ಈ ಸರ್ಕಾರದಲ್ಲೇ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ನಿಮ್ಮ ನೇತೃತ್ವದ ಸರ್ಕಾರದಲ್ಲಿ ಬಿಲ್‌ ಪಾವತಿಗೆ ಕಮಿಷನ್‌ ದುಪ್ಪಟ್ಟಾಗಿದೆ ಎಂದು ಆರೋಪಿಸಿ ರಾಜ್ಯ ಗುತ್ತಿಗೆದಾರರ ಸಂಘ ಈ ಹಿಂದೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿತ್ತು.ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್‌ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೀರಿ. ಆದರೆ, ಹಿಂದಿನ ಸರ್ಕಾರಕ್ಕಿಂತ ಎಲ್ಲ ಇಲಾಖೆಗಳಲ್ಲೂ ಈಗ ಕಮಿಷನ್‌ ದುಪ್ಪಟ್ಟು ಆಗಿದೆ ಎಂದು ನಿಮ್ಮ ಗಮನಕ್ಕೆ ತರಲು ಸಂಘ ವಿಷಾದ ವ್ಯಕ್ತಪಡಿಸುತ್ತದೆ ಎಂದು ಕಿಡಿ ಕಾರಿತ್ತು.

Share This Article