Ad image

ವಾರಕ್ಕೆ 800 ರೂ. ಸಂಬಳ: ಜೀತಕ್ಕೆ ದುಡಿಯುತ್ತಿದ್ದ ಒಡಿಶಾ ಮುಲದ 24 ಮಂದಿ ಕಾರ್ಮಿಕರ ರಕ್ಷಣೆ

Team SanjeMugilu
2 Min Read

ಬಾಗಲಕೋಟೆ: ಜಿಲ್ಲೆಯ ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದ ಇಟ್ಟಿಗೆ ಭಟ್ಟಿಯಲ್ಲಿ ಜೀತಕ್ಕೆ ದುಡಿಯುತ್ತಿದ್ದ ಐವರು ಬಾಲ ಕಾರ್ಮಿಕರು ಸೇರಿದಂತೆ ಒಡಿಶಾ ಮೂಲದ ಒಟ್ಟು 24 ಮಂದಿಯನ್ನು ಇಳಕಲ್ ತಹಶೀಲ್ದಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಈರಪ್ಪ ಕುಂಬಾರ ಎಂಬುವರ ಇಟ್ಟಿಗೆ ಭಟ್ಟಿಯಲ್ಲಿ ಇವರು ಕೆಲಸ ಮಾಡುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಬಾಲ ಕಾರ್ಮಿಕ ನಿಷೇಧ‌‌ ಮತ್ತು ಜೀತ ಪದ್ಧತಿ ನಿಷೇಧ ಕಾಯ್ದೆಯಡಿ ಇಳಕಲ್ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಕೇಸ್​​ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳುಗಳಾಗಿ ಹಲವರು ದುಡಿಯುತ್ತಿದ್ದಾರೆ ಎಂಬ ಬಗ್ಗೆ ಜಿಲ್ಲಾ ಆಡಳಿತಕ್ಕೆ ದೂರು ಬಂದಿದ್ದ ಹಿನ್ನೆಲೆ, ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋ ಮೀಟರ್​​ ದೂರದಲ್ಲಿರುವ ಸಂಕ್ಲಾಪುರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಒತ್ತೆಯಾಳು ಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಆ ಮೂಲಕ ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 99 ಜೀತದಾಳುಗಳ ರಕ್ಷಣೆ ಮಾಡಿದಂತಾಗಿದೆ. ಇಟ್ಟಿಗೆ ಭಟ್ಟಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರ ರಕ್ಷಣೆಯ ಬಳಿಕ ಅವರೆಲ್ಲರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಎಲ್ಲರೂ ಆರೋಗ್ಯವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಅವರನ್ನು ಮರಳಿ ಒಡಿಶಾಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಕಾರ್ಮಿಕರ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ
ಮಾಹಿತಿಯ ಪ್ರಕಾರ ರಕ್ಷಿಸಲ್ಪಟ್ಟ ಕಾರ್ಮಿಕರು ಒಂಭತ್ತು ಕುಟುಂಬಗಳಿಗೆ ಸೇರಿದವರು ಎನ್ನಲಾಗಿದ್ದು, ಇವರು ಮೊದಲು ಕೆಲಸಕ್ಕಾಗಿ ವಿಜಯವಾಡಕ್ಕೆ ಬಂದಿದ್ದರು. ಬಳಿಕ ಅವರನ್ನು ಬಾಗಲಕೋಟೆಗೆ ಕರೆತಂದು ಕೆಲಸ ಮಾಡಿಸಲಾಗುತ್ತಿತ್ತು. ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡಿದ ಪ್ರತೀ ಕುಟುಂಬಕ್ಕೂ ವಾರಕ್ಕೆ ಕೇವಲ 800 ರೂ. ವೇತನ ನೀಡಲಾಗುತ್ತಿತ್ತು. ವಾರದಲ್ಲಿ ಒಬ್ಬ ಕುಟುಂಬ ಸದಸ್ಯನಿಗಷ್ಟೇ ಮಾರುಕಟ್ಟೆಗೆ ಹೋಗಲು ಅನುಮತಿ ಇತ್ತು. ಮಾಲೀಕ ಹಾಗೂ ಅವನ ಇಬ್ಬರು ಪುತ್ರರು ಕಾರ್ಮಿಕರ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆಸುತ್ತಿದ್ದರು.ಈ ಬಗ್ಗೆ ಪ್ರಶ್ನಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಅಲ್ಲದೆ ಈ ಕಾರ್ಮಿಕರು ಇಟ್ಟಿಗೆಗಳಿಂದ ನಿರ್ಮಿಸಿದ ಅಸುರಕ್ಷಿತ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಕನಿಷ್ಠ ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯಗಳೂ ಇವರಿಗೆ ಇರಲಿಲ್ಲ ಎನ್ನಲಾಗಿದೆ.

Share This Article