ಬೆಳಗಾವಿ: ಕೆಲ ದಿನಗಳ ಹಿಂದೆಯಷ್ಟೇ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ 400 ಕೋಟಿ ದರೋಡೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣವೇ ಕಟ್ಟುಕಥೆ ಅಂತ ಎಸ್ಐಟಿ ವರದಿ ಹೇಳಿದೆ.
ಹೌದು. ಬೆಳಗಾವಿ ಗಡಿಯಲ್ಲಿ ನಡೆದಿದೆ ಎನ್ನಲಾಗಿದ್ದ 400 ಕೋಟಿ ಹಣ ಸಾಗಿಸುತ್ತಿದ್ದ 2 ಕಂಟೇನರ್ ಹೈಜಾಕ್ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. 1 ತಿಂಗಳ ಕಾಲ ತನಿಖೆ ನಡೆಸಿದ SIT ಕೃತ್ಯ ನಡೆದಿದೆ ಅನ್ನೋದೇ ಸುಳ್ಳು ಎಂದು ವರದಿ ನೀಡಿದೆ.
400 ಕೋಟಿ ಹಣವಿದ್ದ ಕಂಟೇನರ್ ನಾಪತ್ತೆ ಆಗಿದ್ದು ನಿಜವೇ?
ಖಾನಾಪುರ ತಾಲೂಕಿನ ಛೋರ್ಲಾ ಬಳಿ ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ. ನಗದು ಸಾಗಿಸುತ್ತಿದ್ದ ಎರಡು ಕಂಟೇನರ್ಗಳನ್ನೇ ಹೈಜಾಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. 2 ಕಂಟೇನರ್ಗಳಲ್ಲಿ ಈ ಹಣ ಸಾಗಿಸುತ್ತಿದ್ದಾಗ ಹೈಜಾಕ್ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು.
2025 ರ ಅಕ್ಟೋಬರ್ 16 ರಂದು ಪ್ರಕರಣ ನಡೆದಿತ್ತು. ಆದರೆ, ತಡವಾಗಿ ಬೆಳಕಿಗೆ ಬಂದಿತ್ತು. ಮಾತ್ರವಲ್ಲ, ಸಂದೀಪ್ ಪಾಟೀಲ್ ಎಂಬಾತ ಮಹಾರಾಷ್ಟ್ರದ ನಾಸಿಕ್ ಪೊಲೀಸರಿಗೆ ನೀಡಿದ್ದ ದೂರು ಆಧರಿಸಿ ಪ್ರಕರಣ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಹಕರಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಅವರು ಬೆಳಗಾವಿ ಎಸ್ಪಿ ಅವರಿಗೆ ಪತ್ರ ಬರೆದು ಮನವಿ ಕೂಡ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸತತ 1 ತಿಂಗಳ ತನಿಖೆ ನಡೆಸಿದ ಎಸ್ಐಟಿ ಇದೀಗ ಪ್ರಕರಣ ನಡೆದಿರುವುದೇ ಸುಳ್ಳು ಎಂದು ವರದಿ ನೀಡಿದೆ.
ಕೇಸ್ ಉಲ್ಟಾ ಹೊಡೆದಿದ್ದು ಏಕೆ?
ದೂರುದಾರ ಸಂದೀಪ್ ಪಾಟೀಲ್ ಹೇಳಿಕೆಯಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ. ಕೃತ್ಯದ ಸ್ಥಳ, ಸಮಯ, ಪ್ರಯಾಣ ಮಾರ್ಗ, ಕರೆ ವಿವರಣೆಗಳಲ್ಲಿ ನಿಖರ ಮಾಹಿತಿ ಲಭ್ಯವಾಗಿಲ್ಲ. ಸಾಕ್ಷ್ಯ ಕೊರತೆಯಿಂದಾಗಿ ಎಲ್ಲ ಆರೋಪಿಗಳ ಬಿಡುಗಡೆಗೆ ನ್ಯಾಯಾಲಯ ಆದೇಶ ನೀಡಿದೆ. ಹೀಗಾಗಿ ದರೋಡೆ ನಡೆದಿಲ್ಲ ಎಂದು ವರದಿ ನೀಡಿರುವ ಎಸ್ಐಟಿ ದೂರುದಾರ ಸಂದೀಪ್ ಪಾಟೀಲ್ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಕಾನೂನು ಕ್ರಮಕ್ಕೆ ನಾಸಿಕ್ ಪೊಲೀಸರು ಅಗತ್ಯ ಸಿದ್ಧತೆ ನಡೆಸಿದ್ದಾರೆ.
