ರಾಮನಗರ / ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ಮತ್ತೆ ತೀವ್ರಗೊಂಡಿದೆ. ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ ಬಳಿಕ ಸ್ಫೋಟಕ ಬೆಳವಣಿಗೆಗಳಾಗಬಹುದೇ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಹಾಗೂ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮತ್ತೆ ಸಿಎಂ ಬದಲಾವಣೆ ವಿಚಾರಕ್ಕೆ ಬೆಂಕಿ ಹಚ್ಚಿದ್ದಾರೆ. “ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ. ಶೀಘ್ರದಲ್ಲೇ ಮೂರನೇ ದಿನಾಂಕ ನೀಡುತ್ತೇವೆ” ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.
ಈ ಹಿಂದೆ ನೀಡಿದ್ದ ಎರಡು ದಿನಾಂಕಗಳು ಕೈ ತಪ್ಪಿದ್ದರೂ, ಮೂರನೇ ಡೇಟ್ ಶೀಘ್ರದಲ್ಲೇ ಬಹಿರಂಗವಾಗಲಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ. ಕೆಲ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿರುವ ವಿಚಾರವನ್ನೂ ಉಲ್ಲೇಖಿಸಿ, ಬಜೆಟ್ ಅಧಿವೇಶನಕ್ಕೂ ಮುನ್ನ ಎಲ್ಲರೂ ವಾಪಸ್ಸಾಗಲಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ “ಸಿಎಂ ಬದಲಾವಣೆ ಮುಗಿದ ಅಧ್ಯಾಯ” ಎಂದು ಹೇಳಿದ್ದರಿಂದ ಒಳರಾಜಕೀಯ ಮತ್ತಷ್ಟು ಕುದಿಯಿತು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಯತೀಂದ್ರ ಅವರೇ ನಮ್ಮ ಹೈಕಮಾಂಡ್” ಎಂದು ವ್ಯಂಗ್ಯವಾಡಿದ್ದರು.
ಇನ್ನೊಂದೆಡೆ, “ಜಪದಲ್ಲಿರುವ ಗುರುಗಳು ದಿನಾಂಕ ನೀಡುತ್ತಾರೆ. ಡಿಕೆ ಶಿವಕುಮಾರ್ ಸಿಎಂ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ” ಎಂದು ಇಕ್ಬಾಲ್ ಹುಸೇನ್ ಪುನರುಚ್ಚರಿಸಿದ್ದಾರೆ. ಜೊತೆಗೆ, ವಿದೇಶ ಪ್ರವಾಸ ವಿಚಾರದಲ್ಲಿ “ನಮಗೆ ರಾಮನಗರವೇ ವಿದೇಶ” ಎಂದು ಲೇವಡಿ ಮಾಡಿದ್ದಾರೆ.
ಒಟ್ಟಾರೆ, ಸಿಎಂ ಬದಲಾವಣೆ ವಿಚಾರ ಮತ್ತೆ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿ ಮಾರ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಯಾವ ಬೆಳವಣಿಗೆ ನಡೆಯಲಿದೆ ಎಂಬುದು ಕಾದುನೋಡಬೇಕಾಗಿದೆ.
