Ad image

ಮರಳು ಮಾಫಿಯಾ ಕುರಿತು ಸ್ವಯಂಪ್ರೇರಿತ PIL: ಪ್ರತಿಕ್ರಿಯಿಸಲು ರಾಜ್ಯ ಸರ್ಕಾರಕ್ಕೆ 4 ವಾರ ಕಾಲಾವಕಾಶ ಕೊಟ್ಟ ಹೈಕೋರ್ಟ್​​

Team SanjeMugilu
2 Min Read

ಬೆಂಗಳೂರು: ರಾಜ್ಯದ ವಿವಿಧ ನದಿ ಪಾತ್ರಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಆರೋಪಗಳ ಕುರಿತು ಸ್ವಯಂಪ್ರೇರಿತವಾಗಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ನಾಲ್ಕು ವಾರಗಳ ಅವಧಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂನಾಚಾ ಅವರ ವಿಭಾಗೀಯ ಪೀಠ ಈ ಬಗ್ಗೆ ಸೂಚಿಸಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿದೆ.

ಜನವರಿ 28ರಂದು ಪ್ರಕಟವಾದ ಮಾಧ್ಯಮ ವರದಿಗಳನ್ನು ಪರಿಗಣಿಸಿ ಜನವರಿ 31ರಂದು ಹೈಕೋರ್ಟ್ ವಿಭಾಗೀಯ ಪೀಠವು ಸ್ವಯಂಪ್ರೇರಿತ PIL ದಾಖಲಿಸಲು ಆದೇಶಿಸಿತ್ತು. ಇದೊಂದು ಗಂಭೀರ ವಿಷಯವಾಗಿದೆ. ಕೇಂದ್ರ ಸಂಸ್ಥೆ, ವಿಶೇಷವಾಗಿ ರಚಿಸಲಾದ ತನಿಖಾ ಸಂಸ್ಥೆ ಅಥವಾ ವಿಶೇಷ ತನಿಖಾ ತಂಡದಿಂದ ಮೂಲಕ ನ್ಯಾಯಾಲಯ ಮೇಲ್ವಿಚಾರಣೆಯಲ್ಲಿ ಇದರ ತನಿಖೆಯ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು.

ಜನವರಿ 27ರಂದು ವಿಧಾನಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಇದನ್ನು ಉಲ್ಲೇಖಿಸಿದ ವಿಭಾಗೀಯ ಪೀಠ, ರಾಜ್ಯದ ಗೃಹ ಸಚಿವರೇ ಮರಳು ಮಾಫಿಯಾಗಳ ವಿರುದ್ಧ ಕ್ರಮ ಕೈಗೊಳ್ಳಲು ಅಸಹಾಯಕತೆಯನ್ನು ವ್ಯಕ್ತಪಡಿಸಿದರೆ, ರಾಜ್ಯದ ಆಡಳಿತದಿಂದ ಈ ಅಕ್ರಮ ಚಟುವಟಿಕೆಯನ್ನು ನಿಯಂತ್ರಿಸುವ ನಿರೀಕ್ಷೆ ಇಡಲು ಸಾಧ್ಯವಿಲ್ಲ ಎಂದು ಜನವರಿ 31ರ ಆದೇಶದಲ್ಲಿ ತಿಳಿಸಿತ್ತು.

ಮರಳು ತೆಗೆಯಲು ಟೆಂಡರ್‌ಗಳನ್ನು ಆಹ್ವಾನಿಸಿದ್ದರೂ ಅವುಗಳ ತೆರವು ಆಗಿಲ್ಲ ಎಂಬ ಮಾಧ್ಯಮಗಳ ವರದಿಯನ್ನೂ ಗಮನಿಸಿರುವ ಪೀಠ, ಈ ದೊಡ್ಡ ಹಣದ ವ್ಯವಹಾರದಲ್ಲಿ ಅನೇಕ ‘ದೊಡ್ಡ ಮೀನುಗಳು’ ಭಾಗಿಯಾಗಿದ್ದು, ಗಣಿಗಾರಿಕೆಯನ್ನು ಕಾನೂನುಬದ್ಧಗೊಳಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಿತ್ತು. ಇದಲ್ಲದೆ, ಕೃಷ್ಣಾ ನದಿ ತಟ ಪ್ರದೇಶದಲ್ಲಿ ರಾತ್ರಿ ವೇಳೆ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ವರದಿಗಳು, ಧೂಳು ಬೆಳೆಗಳ ಮೇಲೆ ಕುಳಿತು ರೈತರಿಗೆ ಹಾನಿ ಉಂಟಾಗುತ್ತಿದೆ ಎಂಬ ದೂರುಗಳು ಸೇರಿದಂತೆ ಹಲವು ವಿಷಯಗಳನ್ನು ಪೀಠ ಉಲ್ಲೇಖಿಸಿದೆ. ರಾಯಚೂರು ಜಿಲ್ಲೆಯ ಮಹಿಳಾ ಶಾಸಕಿ ಕರೇಮ್ಮ ಜಿ. ನಾಯಕ್ ಅವರು ತಮ್ಮ ಕ್ಷೇತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಕುರಿತು ಪ್ರಶ್ನೆ ಎತ್ತಿದ ಬಳಿಕ ಮರಳು ಮಾಫಿಯಾದಿಂದ ಜೀವ ಬೆದರಿಕೆ ಬಂದಿರುವುದಾಗಿ ಹೇಳಿದ ವರದಿಗಳನ್ನೂ ನ್ಯಾಯಪೀಠ ತನ್ನ ಆದೇಶದಲ್ಲಿ ಪ್ರಸ್ತಾಪಿಸಿದೆ.

Share This Article