Ad image

ಅಮೆರಿಕ ಸುಪ್ರೀಂ ಕೋರ್ಟ್‌ ತೀರ್ಪಿಗೆ ಟ್ರಂಪ್‌ ಸವಾಲು – ಎಲ್ಲ ದೇಶಗಳ ಮೇಲೆ 10% ಹೆಚ್ಚುವರಿ ಟ್ಯಾರಿಫ್‌ ಘೋಷಣೆ

Team SanjeMugilu
2 Min Read

ವಾಷಿಂಗ್ಟನ್‌: ಜಾಗತಿಕ ಸುಂಕಗಳನ್ನು ಅಸಂವಿಧಾನಿಕ ಎಂದು ಘೋಷಿಸಿದ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೆ ಸವಾಲು ಹಾಕಿದ್ದಾರೆ. ಸುಪ್ರೀಂ ತೀರ್ಪು ಬೆನ್ನಲ್ಲೇ ಹೊಸ ಟ್ಯಾರಿಫ್‌ ಅನ್ನು ಟ್ರಂಪ್‌ ಘೋಷಿಸಿದ್ದಾರೆ.

ಜಾಗತಿಕವಾಗಿ ಎಲ್ಲ ದೇಶಗಳ ಮೇಲೆ 10% ಹೆಚ್ಚುವರಿ ಟ್ಯಾರಿಫ್ ಹೇರಿಕೆ ಮಾಡಿದ್ದಾರೆ. ಸೆಕ್ಷನ್ 122 ರ ಅಡಿಯಲ್ಲಿ 10% ಜಾಗತಿಕ ಸುಂಕವನ್ನು ವಿಧಿಸುವ ಆದೇಶವನ್ನು ಟ್ರಂಪ್‌ ಹೊರಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೂಥ್‌ನಲ್ಲಿ ಈ ಬಗ್ಗೆ ಮಾಹಿತಿ ಟ್ರಂಪ್‌ ಮಾಹಿತಿ ಹಂಚಿಕೊಂಡಿದ್ದಾರೆ. ಈಗಿರುವ ಟ್ಯಾರಿಫ್ ಜೊತೆಗೆ 10% ಹೆಚ್ಚುವರಿ ಟ್ಯಾರಿಫ್ ವಿಧಿಸಲಾಗುತ್ತಿದೆ. ಈ ಕಡತಕ್ಕೆ ಸಹಿ ಹಾಕುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಅಮೆರಿಕದ ಉದ್ಯಮ, ಕೈಗಾರಿಗೆ, ಕಾರ್ಮಿಕರ ರಕ್ಷಣೆಗೆ ಟ್ಯಾರಿಫ್ ಪ್ರಬಲ ಸಾಧನ. ಅನ್ಯಾಯದ ವ್ಯಾಪಾರ ನೀತಿಗಳಿಂದ ಅಮೆರಿಕವನ್ನು ರಕ್ಷಿಸಲು ಆಡಳಿತವು ಸೆಕ್ಷನ್ 301 ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ಹಲವಾರು ತನಿಖೆಗಳನ್ನು ಪ್ರಾರಂಭಿಸುತ್ತಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಟ್ರಂಪ್ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ತಮ್ಮ ಸರ್ಕಾರದ ವಾದಗಳನ್ನು ಸರಿಯಾಗಿ ಆಲಿಸಿಲ್ಲ.‌ ಸುಪ್ರೀಂ ಕೋರ್ಟ್ ಆದೇಶ ನಿರಾಶಾದಾಯಕ, ಇಂತಹ ನಿರ್ಧಾರವನ್ನು ನಿರೀಕ್ಷಿಸಿರಲಿಲ್ಲ. ಈ ತೀರ್ಪು ನಿರುತ್ಸಾಹಗೊಳಿಸುವಂತಹದ್ದಾಗಿದೆ ಮತ್ತು ಅಮೆರಿಕದ ಆರ್ಥಿಕ ಹಿತಾಸಕ್ತಿಗಳಿಗೆ ಹಾನಿ ಮಾಡಬಹುದು. ಆದೇಶದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಅಮೆರಿಕದ ಕೈಗಾರಿಕೆಗಳ ಹಿತಾಸಕ್ತಿಗಳಿಗೆ ನ್ಯಾಯಾಲಯವು ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಿಲ್ಲ. ಅಮೆರಿಕವನ್ನು ಮತ್ತೆ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವುದು ನನ್ನ ಗುರಿ. ಇದನ್ನು ಸಾಧಿಸಲು ಕಠಿಣ ವ್ಯಾಪಾರ ನೀತಿಗಳು ಅತ್ಯಗತ್ಯ ಎಂದು ಹೇಳಿದ್ದಾರೆ.

ಸುಂಕಗಳಿಗೆ ಸಂಬಂಧಿಸಿದಂತೆ ಸರ್ಕಾರವು ಇನ್ನೂ ಅನೇಕ ಕಾನೂನು ಮತ್ತು ನೀತಿ ಆಯ್ಕೆಗಳನ್ನು ಹೊಂದಿದೆ. ನನ್ನ ಆಡಳಿತ ತಂಡವು ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸುತ್ತಿದೆ. ಅಮೆರಿಕನ್ ಕೈಗಾರಿಕೆಗಳು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಎಂಟು ಯುದ್ಧಗಳಲ್ಲಿ ಐದು ಯುದ್ಧಗಳು ಸುಂಕಗಳಿಂದಲೇ ಕೊನೆಗೊಂಡಿವೆ ಎನ್ನುವುದನ್ನು ಗಮನಿಸಬೇಕಿತ್ತು ಎಂದು ಸುಪ್ರೀಂ ಆದೇಶದ ಬಗ್ಗೆ ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಬಳಿಕ ಟ್ರಂಪ್‌ ಘೋಷಿಸಿದ 10% ಹೆಚ್ಚುವರಿ ಟ್ಯಾರಿಫ್ ಬಿಸಿ ಭಾರತಕ್ಕೂ ತಗುಲಿದೆ. ಅಮೆರಿಕ-ಭಾರತ ವ್ಯಾಪರ ಒಪ್ಪಂದದ ಬಳಿಕ 50% ರಿಂದ 18% ಗೆ ಟ್ಯಾರಿಫ್ ಇಳಿಕೆ ಮಾಡಲಾಗಿತ್ತು. ಈಗ ಹೊಸದಾಗಿ 10% ಟ್ಯಾರಿಫ್ ಹೇರಿಕೆ ಹಿನ್ನೆಲೆ 28% ಟ್ಯಾರಿಫ್ ಪ್ರಮಾಣ ಹೆಚ್ಚಳವಾಗಲಿದೆ. ಭಾರತಕ್ಕೂ ಟ್ಯಾರಿಫ್ ಹೆಚ್ಚುವ ಬಗ್ಗೆ ಶ್ವೇತಭವನದ ಅಧಿಕಾರಿಗಳಿಂದ ಮಾಹಿತಿ ಹೊರಬಿದ್ದಿದೆ. ಹೊಸ ಕಾನೂನು ಪ್ರಾಧಿಕಾರವನ್ನು ಅನ್ವಯಿಸುವವರೆಗೆ ಟ್ಯಾರಿಫ್ ಜಾರಿಯಲ್ಲಿರುತ್ತದೆ. ಹೊಸ ಕಾನೂನು ಪ್ರಾಧಿಕಾರದ ರಚನೆ ಬಳಿಕ ಟ್ಯಾರಿಫ್ ಮರು ಪರಿಶೀಲನೆ ಮಾಡಲಾಗುವುದು.

Share This Article