Ad image

ಶಿಕಾರಿಪುರದಲ್ಲಿ BSY ಹುಟ್ಟುಹಬ್ಬದ ಸಂಭ್ರಮಕ್ಕೆ ಸಿದ್ಧತೆ.. ಶಕ್ತಿ ಪ್ರದರ್ಶನಕ್ಕೆ ಬಿವೈವಿ ಭರ್ಜರಿ ಪ್ಲಾನ್..!

Team SanjeMugilu
2 Min Read

ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ಎಂದಿಗೂ ವಿಶೇಷ ಮಹತ್ವವಿದೆ. ಇದೇ ಬರುವ ಫೆಬ್ರವರಿ 27ರಂದು ಬಿಎಸ್‌ವೈ ಅವರ ಜನ್ಮದಿನವಿದ್ದು, ಈ ಬಾರಿ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಅದ್ದೂರಿ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿವೆ.

ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ಎಂದಿಗೂ ವಿಶೇಷ ಮಹತ್ವವಿದೆ. ಇದೇ ಬರುವ ಫೆಬ್ರವರಿ 27ರಂದು ಬಿಎಸ್‌ವೈ ಅವರ ಜನ್ಮದಿನವಿದ್ದು, ಈ ಬಾರಿ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಅದ್ದೂರಿ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿವೆ. ಈ ಬಾರಿಯ ‘ಬರ್ತ್‌ಡೇ’ ಕೇವಲ ಸಂಭ್ರಮಾಚರಣೆಯಾಗಿ ಉಳಿದಿಲ್ಲ, ಬದಲಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಹುದೊಡ್ಡ ರಾಜಕೀಯ ‘ಶಕ್ತಿ ಪ್ರದರ್ಶನ’ದ ವೇದಿಕೆಯಾಗಿ ಮಾರ್ಪಡುತ್ತಿದೆ.

ಶಿಕಾರಿಪುರದಲ್ಲಿ ನಡೆಯಲಿರುವ ಬಿಎಸ್​​ವೈ ಹುಟ್ಟುಹಬ್ಬದ ಮೂಲಕ ಬೃಹತ್ ಪ್ರಮಾಣದಲ್ಲಿ ಮತಗಳನ್ನು ಕ್ರೂಢೀಕರಿಸಲು ಬಿ.ವೈ. ವಿಜಯೇಂದ್ರ ಪ್ಲಾನ್ ಮಾಡಿದ್ದಾರೆ. ಕಳೆದ ಚುನಾವಣೆಗಿಂತ ಮುಂಬರುವ ದಿನಗಳಲ್ಲಿ ತಮ್ಮ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಂದೆಯ ಮೊರೆ ಹೋಗಿದ್ದಾರೆ. ಶಿಕಾರಿಪುರ ಭದ್ರಕೋಟೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲು, ಬಿಎಸ್‌ವೈ ಅವರ ರಾಜಕೀಯ ವರ್ಚಸ್ಸು, ಜಾತಿ ಬಲ, ಆರ್‌ಎಸ್‌ಎಸ್ ಹಾಗೂ ಪಕ್ಷದ ಸಂಪೂರ್ಣ ಬೆಂಬಲವನ್ನು ತಮ್ಮದಾಗಿಸಿಕೊಳ್ಳಲು ಈ ಬರ್ತ್‌ಡೇ ಸೆಲೆಬ್ರೇಷನ್ ಅನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.

‘ಹೈಕಮಾಂಡ್’ಗೆ ಸ್ಪಷ್ಟ ಸಂದೇಶ
ಕಳೆದ ಬಾರಿ ಬಿಎಸ್‌ವೈ ಹುಟ್ಟುಹಬ್ಬದ ಅದ್ದೂರಿ ಆಚರಣೆಗೆ ಸ್ವಪಕ್ಷದ ಕೆಲವು ನಾಯಕರ ಸಲಹೆಯಂತೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಆದರೆ ಈ ಬಾರಿ ಯಾವುದೇ ಅಡೆತಡೆಗಳಿಲ್ಲದೆ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ, ರಾಜ್ಯದ ನಾಯಕರಿಗೆ ಹಾಗೂ ‘ಹೈಕಮಾಂಡ್’ಗೆ ತಮ್ಮ ಬಲ ಪ್ರದರ್ಶಿಸಲು ವಿಜಯೇಂದ್ರ ಮುಂದಾಗಿದ್ದಾರೆ. “ಬಿಎಸ್‌ವೈ ಬೆನ್ನಿಗಿರುವ ಜಾತಿ ಬಲ ಹಾಗೂ ಜನಬೆಂಬಲ ನನ್ನ ಜೊತೆಗೂ ಇದೆ” ಎಂಬ ಸ್ಪಷ್ಟ ಸಂದೇಶವನ್ನು ಸ್ವಪಕ್ಷದ ವಿರೋಧಿ ಬಣಕ್ಕೆ ರವಾನಿಸುವುದು ಈ ಮೆಗಾ ಇವೆಂಟ್‌ನ ಹಿಂದಿನ ಪ್ರಮುಖ ಉದ್ದೇಶವಾಗಿದೆ.

ಬಿಎಸ್‌ವೈ ಸಮ್ಮುಖದಲ್ಲೇ ಲಿಂಗಾಯತ ನಾಯಕರ ಒಗ್ಗೂಡುವಿಕೆ
ಸಮುದಾಯದ ಒಗ್ಗಟ್ಟು ಮತ್ತು ಅಪ್ಪನ ವರ್ಚಸ್ಸನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಮುಂದಾಗಿರುವ ಬಿವೈವಿ, ಯಡಿಯೂರಪ್ಪನವರ ಸಮ್ಮುಖದಲ್ಲೇ ಪ್ರಬಲ ಲಿಂಗಾಯತ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನದಲ್ಲಿದ್ದಾರೆ. ಯಡಿಯೂರಪ್ಪ ಕುಟುಂಬದ ವತಿಯಿಂದಲೇ ಕೇಂದ್ರದ ವರಿಷ್ಠರಿಗೆ, ರಾಜ್ಯದ ಪ್ರಮುಖ ನಾಯಕರಿಗೆ, ಸಂಘ ಪರಿವಾರದ ಮುಖಂಡರಿಗೆ ಹಾಗೂ ಪ್ರಬಲ ಲಿಂಗಾಯತ ನಾಯಕರಿಗೆ ಅಧಿಕೃತ ಆಹ್ವಾನ ನೀಡಲಾಗುತ್ತಿದೆ.

ಚುನಾವಣಾ ಪ್ರಚಾರಕ್ಕೆ ರಣಕಹಳೆ?
ಒಟ್ಟಿನಲ್ಲಿ ಶಿಕಾರಿಪುರದಲ್ಲಿ ಬೃಹತ್ ವೇದಿಕೆ ನಿರ್ಮಿಸಿ, ಸಾವಿರಾರು ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುತ್ತಿರುವ ಬಿ.ವೈ. ವಿಜಯೇಂದ್ರ ಅವರ ಈ ನಡೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಯಡಿಯೂರಪ್ಪನವರ ಬರ್ತ್‌ಡೇ ಸಂಭ್ರಮವು, ಮುಂಬರುವ ಚುನಾವಣೆಗಳ ಪ್ರಚಾರಕ್ಕೆ ಬಹುದೊಡ್ಡ ವೇದಿಕೆಯಾಗಲಿದೆಯೇ? ಕಾದು ನೋಡಬೇಕಿದೆ.

Share This Article