ರಾಜ್ಯದ ಅಭಿವೃದ್ಧಿಯ ರಥಕ್ಕೆ ಇಂಧನವಾಗಬೇಕಿದ್ದ ಪಂಚಾಯತ್‌ರಾಜ್ ವ್ಯವಸ್ಥೆಯ ಮೂರು ಹಂತದ ಚುನಾಯಿತ ಆಡಳಿತಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಗ್ರಾಮ ಸ್ವರಾಜ್ಯದ ಕನಸನ್ನು ಹೊತ್ತಿದ್ದ ಸ್ಥಳೀಯ ಸಂಸ್ಥೆಗಳ ಬಂಡಿ ವರ್ಷಗಳಿಂದ ನಿಂತಲ್ಲೇ ನಿಂತಿದ್ದು, ಪ್ರಜಾಪ್ರಭುತ್ವದ ವಿಕೇಂದ್ರೀಕರಣ ಪ್ರಕ್ರಿಯೆ ಹಳ್ಳ ಹಿಡಿದಿದೆ. ಇದರ ಪರಿಣಾಮವಾಗಿ ರಾಜ್ಯದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸ್ಥಳೀಯ ನಾಯಕರು ಅಧಿಕಾರವಂಚಿತರಾಗಿದ್ದಾರೆ.
ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ ಮುಗಿದು ಈಗಾಗಲೇ ಐದು ವರ್ಷಗಳಾಗಿವೆ. ಇದಕ್ಕೆ ಜೊತೆಗೆ ಮಹಾನಗರ ಪಾಲಿಕೆ ಸೇರಿ ಬಹುತೇಕ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲೂ ಚುನಾಯಿತ ಆಡಳಿತ ಇಲ್ಲದಂತಾಗಿದೆ. ಇದರೊಂದಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೂಪುಗೊಳ್ಳುತ್ತಿದ್ದ ಎರಡನೇ ಹಂತದ ನಾಯಕತ್ವ ಸಂಪೂರ್ಣವಾಗಿ ಮಂಕಾಗಿದೆ. ವಿಶೇಷವಾಗಿ ದಲಿತರು, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ ದೊರೆಯುತ್ತಿದ್ದ ಆಡಳಿತದ ಅವಕಾಶ ಕೈ ತಪ್ಪಿದೆ.
ನನೆಗುದಿಗೆ ಬಿದ್ದ ಮೂಲಸೌಕರ್ಯ
ಚುನಾಯಿತ ಜನಪ್ರತಿನಿಧಿಗಳಿದ್ದಾಗ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ರಸ್ತೆ ದುರಸ್ತಿ ಮೊದಲಾದ ಮೂಲಭೂತ ಸಮಸ್ಯೆಗಳು ತಕ್ಷಣ ಸ್ಪಂದನೆ ಪಡೆಯುತ್ತಿದ್ದವು. ಆದರೆ ಈಗ ಅಧಿಕಾರಿಗಳೇ ಆಡಳಿತ ನಡೆಸುತ್ತಿರುವುದರಿಂದ ಜನರು ಕಚೇರಿಗಳ ಮೆಟ್ಟಿಲೇರುವ ಸ್ಥಿತಿ ಎದುರಾಗಿದೆ. ಕೇಂದ್ರದಿಂದ ಬರಬೇಕಿದ್ದ 14ನೇ ಹಣಕಾಸು ಆಯೋಗದ ಅನುದಾನವೂ ಸಮರ್ಪಕವಾಗಿ ಬಳಕೆಯಾಗದೆ ಗ್ರಾಮೀಣ ಅಭಿವೃದ್ಧಿ ಕುಂಠಿತಗೊಂಡಿದೆ.
‘ಯಜಮಾನ’ ಪದ್ಧತಿಗೆ ಹಿಂತಿರುಗುತ್ತಿವೆಯೇ ಹಳ್ಳಿಗಳು?
ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಶೇ.50ರಷ್ಟು ಮೀಸಲು ಮೂಲಕ ಮಹಿಳೆಯರು ಹಾಗೂ ಪರಿಶಿಷ್ಟ, ಹಿಂದುಳಿದ ವರ್ಗದವರು ಸೇರಿ ಶೇ.48ರಷ್ಟು ತಳ ಸಮುದಾಯದವರು ಅಧಿಕಾರ ಹಿಡಿಯುತ್ತಿದ್ದರು. ಸಾಮಾನ್ಯ ಕೂಲಿ ಕಾರ್ಮಿಕನೂ ಆಡಳಿತ ವರ್ಗದ ಭಾಗವಾಗುತ್ತಿದ್ದ ಈ ಸಾಮಾಜಿಕ ಚಮತ್ಕಾರಕ್ಕೆ ಈಗ ಬ್ರೇಕ್ ಬಿದ್ದಿದೆ. ಜನಪ್ರತಿನಿಧಿಗಳ ಕೊರತೆಯಿಂದ ಹಳ್ಳಿಗಳು ಮತ್ತೆ ಹಳೆಯ ಶ್ರೇಣೀಕೃತ ‘ಯಜಮಾನ’ ಪದ್ಧತಿಯತ್ತ ಮುಖ ಮಾಡುತ್ತಿವೆಯೇ ಎಂಬ ಆತಂಕ ಗಂಭೀರವಾಗಿದೆ.
