ಹಾಸನ : ನಾಯಕತ್ವ ಬದಲಾವಣೆ, ಕುರ್ಚಿ ಕಾದಾಟದ ನಡುವೆ ಹಾಸನ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಾಸನ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ಸರ್ಕಾರದ ಯೋಜನೆ ಹಾಗೂ ರಾಜ್ಯ ನಾಯಕರ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ. ಗ್ಯಾರಂಟಿ ಯೋಚನೆಯಿಂದ ಗೆಲ್ಲೋಕೆ ಆಗಲ್ಲ ಎನ್ನುತ್ತಾ ಸಭೆಯಲ್ಲಿ ಪರೋಕ್ಷವಾಗಿ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಕೆಂಡಕಾರಿದ್ದಾರೆ.
ಮಾಜಿ ಶಾಸಕ ಪುಟ್ಟೇಗೌಡ ನಿವಾಸದಲ್ಲಿ ಸಭೆ
ಚನ್ನರಾಯಪಟ್ಟಣದ ಮಾಜಿ ಶಾಸಕ ಪುಟ್ಟೇಗೌಡ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದ್ರು. ಈ ವೇಳೆ ರಾಜ್ಯ ಸರ್ಕಾರ ಹಾಗೂ ಸಂಪುಟ ಸಚಿವರ ವಿರುದ್ಧವೇ ಕೈ ಮುಖಂಡರು ಕೆಂಡಕಾರಿದ್ದಾರೆ. ಗ್ಯಾರಂಟಿ ಯೋಜನೆಗಳ ವಿರುದ್ಧವೂ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಮುಖಂಡರು ಆಕ್ರೋಶ
ಈ ಸಭೆಯಲ್ಲಿ ಹಾಸನ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ರು. ಸಭೆಯಲ್ಲಿ ಮಾತಾಡಿದ ಕೈ ಮುಖಂಡ ಹೆಚ್.ಕೆ ಮಹೇಶ್, ಹೀಗೇ ಮುಂದುವರೆದ್ರೆ ಕಾಂಗ್ರೆಸ್ ನೆಲ ಕಚ್ಚೋದು ಖಚಿತ ಎಂದಿದ್ದಾರೆ. ಹೆಚ್.ಕೆ ಮಹೇಶ್ ಮಾತಿಗೆ ಸಭೆಯಲ್ಲಿದ್ದ ಇತರ ಕಾಂಗ್ರೆಸ್ ಮುಖಂಡರು ಕೂಡ ಧ್ವನಿಗೂಡಿಸಿದ್ರು ಎಂದು ತಿಳಿದು ಬಂದಿದೆ.
ಜಿಲ್ಲಾ ಉಸ್ತುವಾರಿಗಳ ವಿರುದ್ಧವೂ ಕಿಡಿ
ಇದೇ ವೇಳೆ ಮಾತಾಡಿದ ಕೈ ಮುಖಂಡ ಹೆಚ್.ಕೆ ಮಹೇಶ್, ಸಿದ್ದರಾಮಯ್ಯ ಅವರ ಬಳಿ ಹೋಗೋಣ ಅಂದ್ರೆ ಅವರು ತಾನೇ ಏನನ್ ಮಾಡ್ತಾರೆ ಕರೆಸಿ ಮಾತಾಡೋಣ ಅಂತಾರೆ. ಪಕ್ಷದ ಮೇಲಕ್ಕೆತ್ತುವ ಆಸಕ್ತಿ ರಾಜ್ಯ ಮಟ್ಟದ ನಾಯಕರಿಗೆ ಇಲ್ಲ. ಕೃಷ್ಣ ಬೈರೇಗೌಡರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದಿದ್ದಾರೆ. ಆದ್ರೆ ಅವರೇ ಓಪನ್ ಆಗಿಯೇ ಹೇಳ್ತಾರೆ. ಕಾನೂನಂತೆ ಇದ್ರೆ ಕೇಳಿ ಇಲ್ಲದಿದ್ರೆ ಕೇಳಬೇಡಿ ಎಂದಿದ್ದಾರೆ. ಅವರನ್ನ ನಾವು ಪ್ರಶ್ನೇನೂ ಮಾಡಲು ಆಗಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹಣ ಕೊಟ್ರೆನೇ ಕೆಲಸ- ಮುಖಂಡರ ಆರೋಪ
ಅಲ್ಲಿ ನಾಟಕ ಮಾಡೋರಿಗೆ ಮಾತ್ರ ಕಾಲ. ಬೆಳಿಗ್ಗೆ ಹೊತ್ತು ಹೋದ್ರೆ ಮನೆ ಮುಂದೆ ಏಜೆಂಟ್‌ಗಳೇ ಇರ್ತಾರೆ. ಮೇಲ್ಮಟ್ಟದವರು ಸರಿಯಾಗದಿದ್ರೆ ನಾವೇನು ಮಾಡೋಕಾಗಲ್ಲ. ಯಾವ ಮಂತ್ರಿ ಹತ್ರ ಹೋದ್ರೂ ಟೈಮೇ ಇಲ್ಲಾ ಅಂತಾರೆ. ನೀವ್ ಕೊಡ್ತಿರಾ ಬನ್ನಿ ಅಂತಾರೆ ಕಾಂಗ್ರೆಸ್ ಮಂತ್ರಿಗಳು. ಹಣ ಇಲ್ಲದೆ ಕೆಲಸ ಮಾಡೊಲ್ಲ ಎಂದು ಪರೋಕ್ಷವಾಗಿ ಕೈ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ಗ್ಯಾರೆಂಟಿ ಯೋಜನೆಗಳಿಂದ ಗೆಲ್ಲೋಕೆ ಆಗಲ್ಲ
ಎಲ್ಲರೂ ತಿಳ್ಕೊಂಡಿದ್ದಾರೆ ಜೆಡಿಎಸ್ ಎಲ್ಲೋ ಹೋಗಿದೆ ಅಂತ .ಐದು ಗ್ಯಾರೆಂಟಿ ಕೊಟ್ಟಿದ್ದೇವೆ ಅನ್ಕೊಂಡಿದ್ದಾರೆ. ಐದು ಗ್ಯಾರೆಂಟಿಗಳನ್ನ ಮೂರೂ ಪಕ್ಷದವರೂ ತಿಂತಿದ್ದಾರೆ. ಗ್ಯಾರೆಂಟಿ ಮೇಲೆ ಎಲೆಕ್ಷನ್ ಗೆಲ್ತೇವೆ ಅನ್ನೋದನ್ನ ಬಿಟ್ಬಿಡಿ. ಕಾರ್ಯಕರ್ತನ ಮೇಲೆ ಎಲೆಕ್ಷನ್ ಗೆಲ್ತೇವೆ ಅನ್ನೋದನ್ನ ತಿಳ್ಕೊಳ್ಳಿ ಎಂದು ಮುಖಂಡರು ಕಿಡಿಕಾರಿದ್ರು.
ನಮ್ಮ ಕಾರ್ಯಕರ್ತ ಪೊಲೀಸರಿಗೆ ಸಿಕ್ಕಾಕೊಂಡ್ರೆ ಅವನನ್ನ ಬಿಡಿಸೋಕು ಆಗಲ್ಲ. ನಮ್ಮ ಜಿಲ್ಲೆಯ ರಾಜಕಾರಣಾನೇ ಬೇರೆ ಅಲ್ಲಿಯ ರಾಜಕಾರಣವೇ ಬೇರೆ. ನಾವೆಲ್ಲರೂ ಹೋಗಿ ಪ್ರಶ್ನೆ ಮಾಡದಿದ್ರೆ ಯಾವುದೇ ನಾಯಕರಿಂದಲೂ ನಮಗೆ ಅನುಕೂಲ ಆಗೋದಿಲ್ಲ ಎಂದು ಕೈ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ಹಾಸನ ಕಾಂಗ್ರೆಸ್ನಲ್ಲಿ ಭುಗಿಲೆದ್ದ ಅಸಮಾಧಾನ; ಹಣ ಕೊಡ್ತೀರಾ ಬನ್ನಿ ಅಂತಾರೆ, ಸಚಿವರ ವಿರುದ್ಧ ಕೈ ಮುಖಂಡರ ಆಕ್ರೋಶ
