ಕರುನಾಡಿನ ನಿರುದ್ಯೋಗಿ ಯುವಕರಿಗೆ ಇವತ್ತು ನಿಜಕ್ಕೂ ಸಂಭ್ರಮದ ದಿನ! ಹೌದು, ಬಹುನಿರೀಕ್ಷಿತ 2026ರ ರಾಜ್ಯ ಬಜೆಟ್ ಮಂಡನೆ ಆರಂಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಸಿಹಿಸುದ್ದಿ ಕೊಟ್ಟಿದ್ದಾರೆ. ಸರ್ಕಾರಿ ಕೆಲಸದ ಕನಸು ಹೊತ್ತು ಕೂತಿದ್ದ ಲಕ್ಷಾಂತರ ಯುವಜನತೆಗೆ ರಿಲೀಫ್ ನೀಡುವ ನಿಟ್ಟಿನಲ್ಲಿ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಿಎಂ ತಮ್ಮ 17ನೇ ಬಜೆಟ್ ಭಾಷಣದ ಶುರುವಿನಲ್ಲೇ ಘೋಷಿಸಿ ಯುವಕರ ಮನಗೆದ್ದಿದ್ದಾರೆ.
ಧಾರವಾಡದ ಯುವಕರ ಹೋರಾಟಕ್ಕೆ ಸಿಕ್ತು ಬಿಗ್ ಜಯ!
ಇತ್ತೀಚೆಗಷ್ಟೇ ವಿದ್ಯಾನಗರಿ ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಂಕಾಂಕ್ಷಿಗಳು ಹಾಗೂ ನಿರುದ್ಯೋಗಿ ಯುವಕರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು. “ವರ್ಷಾನುಗಟ್ಟಲೆ ಓದಿದ್ರು ನೋಟಿಫಿಕೇಶನ್ ಇಲ್ಲದೆ ವಯಸ್ಸು ಮೀರಿ ಹೋಗ್ತಿದೆ, ಕೂಡಲೇ ನೇಮಕಾತಿ ಪ್ರಕ್ರಿಯೆ ಶುರು ಮಾಡಿ” ಅಂತ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಧಾರವಾಡದ ಯುವಕರ ಈ ಆಕ್ರೋಶ ಮತ್ತು ಕೂಗು ಕೊನೆಗೂ ವಿಧಾನಸೌಧದ ಮೆಟ್ಟಿಲೇರಿದ್ದು, ಸಿಎಂ ಸಿದ್ದರಾಮಯ್ಯ ಯುವಕರ ಧ್ವನಿಗೆ ಓಗೊಟ್ಟು ಈ ಬೃಹತ್ ನೇಮಕಾತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಬೆಂಗಳೂರು, ಧಾರವಾಡ, ಮೈಸೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಪಿಜಿ ಮಾಡಿಕೊಂಡು, ಕೋಚಿಂಗ್ ಸೆಂಟರ್‌ಗಳಿಗೆ ಸಾವಿರಾರು ರೂಪಾಯಿ ಸುರಿದು ಹಗಲಿರುಳು ಓದುತ್ತಿರುವ ಲಕ್ಷಾಂತರ ಯುವಕರಿಗೆ ಈ ಘೋಷಣೆ ದೊಡ್ಡ ಬೂಸ್ಟ್ ಕೊಟ್ಟಿದೆ. ಭಾರಿ ನಿರಾಸೆಯಲ್ಲಿದ್ದ ಆಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿದ್ದು, ಮತ್ತೆ ಹುಮ್ಮಸ್ಸಿನಿಂದ ಪುಸ್ತಕ ಹಿಡಿದು ಓದಿಗೆ ಅಣಿಯಾಗಲು ಈ 56 ಸಾವಿರ ಹುದ್ದೆಗಳ ಭರ್ತಿಯ ಮಾತು ಸಂಜೀವಿನಿಯಂತೆ ಕೆಲಸ ಮಾಡಿದೆ.
ಯಾವ್ಯಾವ ಇಲಾಖೆಗಳಿಗೆ ಬೀಳಲಿದೆ ಲಾಟರಿ?
ಸದ್ಯ ಸಿಎಂ ಬಜೆಟ್‌ನಲ್ಲಿ ಒಟ್ಟಾರೆ 56 ಸಾವಿರ ಹುದ್ದೆಗಳ ಭರ್ತಿ ಅಂತ ಹೇಳಿದ್ದರೂ, ಯಾವ ಇಲಾಖೆಯಲ್ಲಿ ಎಷ್ಟು ಅಂತ ಅಧಿಕೃತ ಬ್ರೇಕಪ್ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ವಿಧಾನಸೌಧದ ಮೂಲಗಳ ಪ್ರಕಾರ, ಅತಿ ಹೆಚ್ಚು ಖಾಲಿ ಇರುವ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ (ಶಿಕ್ಷಕರ ನೇಮಕಾತಿ), ಆರೋಗ್ಯ, ಕಂದಾಯ ಮತ್ತು ಕಲ್ಯಾಣ ಇಲಾಖೆಗಳಲ್ಲಿ ದೊಡ್ಡ ಮಟ್ಟದ ನೇಮಕಾತಿ ನಡೆಯುವ ಪಕ್ಕಾ ಲೆಕ್ಕಾಚಾರವಿದೆ.
ಸಿಎಂ ಬಾಯಿಂದ ಈ ಮೆಗಾ ಘೋಷಣೆ ಹೊರಬಿದ್ದ ತಕ್ಷಣ, ಎಲ್ಲರ ಕಣ್ಣುಗಳು ಈಗ ನೇಮಕಾತಿ ಪ್ರಾಧಿಕಾರಗಳಾದ ಕೆಪಿಎಸ್‌ಸಿ (KPSC) ಮತ್ತು ಕೆಇಎ (KEA) ಕಡೆ ತಿರುಗಿವೆ. ಬಜೆಟ್‌ನಲ್ಲಿ ಅನುದಾನ ಮೀಸಲು ಇಡಿದ ನಂತರ, ಆಯಾ ಇಲಾಖೆಗಳಿಂದ ಅಧಿಕೃತ ಪ್ರಸ್ತಾವನೆಗಳು ಹೋಗಿ, ಶೀಘ್ರವೇ ನೋಟಿಫಿಕೇಶನ್‌ಗಳು ಹೊರಬರುವ ನಿರೀಕ್ಷೆಯಿದೆ. ಒಟ್ಟಾರೆ, ಗ್ಯಾರಂಟಿಗಳ ಜೊತೆಗೆ, ಯುವಕರ ವಿಶ್ವಾಸ ಅರ್ಜಿಸಲು ಮತ್ತು ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಾನೂನು ರೂಪಿಸಲು ಸರ್ಕಾರ ಭರ್ಜರಿ ಯೋಜನೆ ಮಾಡಿದೆ.
ಬಜೆಟ್ ಆರಂಭದಲ್ಲೇ ಉದ್ಯೋಗಾಂಕಾಂಕ್ಷಿಗಳಿಗೆ ಬಂಪರ್ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ!
