Ad image

ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮೇಲೆ ಗುಂಡಿನ ದಾಳಿ

Team SanjeMugilu
2 Min Read

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪೋಷಕ ಡಾ. ಫಾರೂಕ್ ಅಬ್ದುಲ್ಲಾ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಡೆದ ವಕೀಲರೊಬ್ಬರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಡಾ. ಫಾರೂಕ್ ಅಬ್ದುಲ್ಲಾ ತೆರಳಿದ್ದರು. ಈ ಸಂದರ್ಭದಲ್ಲಿ ಹಠಾತ್ತಾಗಿ ವ್ಯಕ್ತಿಯೊಬ್ಬ ಅವರ ಬಳಿ ಬಂದು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದ ಆರೋಪಿಯನ್ನು ಜಮ್ಮು ಮೂಲದ ಕಮಲ್ ಸಿಂಗ್ ಜಮ್ವಾಲ್ ಎಂದು ಗುರುತಿಸಲಾಗಿದೆ. ದಾಳಿ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆರೋಪಿಯನ್ನು ಕೆಳಕ್ಕೆ ಕೆಡವಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪುತ್ರ ಹಾಗೂ ಸಿಎಂ ಓಮರ್ ಅಬ್ದುಲ್ಲಾ ಆತಂಕ

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮತ್ತು ಫಾರೂಕ್ ಅಬ್ದುಲ್ಲಾ ಅವರ ಪುತ್ರ ಓಮರ್ ಅಬ್ದುಲ್ಲಾ, “ಅಲ್ಲಾಹನು ದಯಾಳು, ನನ್ನ ತಂದೆ ಅಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ಮಾಹಿತಿ ಅಸ್ಪಷ್ಟವಾಗಿದೆ, ಆದರೆ ಲೋಡ್ ಆಗಿದ್ದ ಪಿಸ್ತೂಲಿನೊಂದಿಗೆ ವ್ಯಕ್ತಿಯೊಬ್ಬರು ಅವರ ತೀರಾ ಹತ್ತಿರ ಬಂದು ಗುಂಡು ಹಾರಿಸಿದ್ದಾರೆ. ಭದ್ರತಾ ಪಡೆ ಸಮಯಪ್ರಜ್ಞೆ ಮೆರೆದು ಹತ್ಯೆಯ ಯತ್ನವನ್ನು ವಿಫಲಗೊಳಿಸಿದೆ. ಆದರೆ, ಝೆಡ್ ಪ್ಲಸ್ (Z+) ಎನ್‌ಎಸ್‌ಜಿ ಭದ್ರತೆ ಇರುವ ಮಾಜಿ ಮುಖ್ಯಮಂತ್ರಿಯ ಇಷ್ಟು ಹತ್ತಿರ ವ್ಯಕ್ತಿಯೊಬ್ಬ ಹೇಗೆ ಬರಲು ಸಾಧ್ಯ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಫಾರೂಕ್ ಅಬ್ದುಲ್ಲಾ ಅವರ ಮೇಲೆ ದಾಳಿ ನಡೆದ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆರೋಪಿ ಅಬ್ದುಲ್ಲಾ ಅವರ ತೀರಾ ಹತ್ತಿರಕ್ಕೆ ಹೋಗಿ ಗುಂಡು ಹಾರಿಸುವುದನ್ನು ಕಾಣಬಹುದು. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನ ಮೇಲೆರಗಿ ನಿಯಂತ್ರಣಕ್ಕೆ ಪಡೆದಿದ್ದಾರೆ.  ಈ ಘಟನೆಯನ್ನು ಜಮ್ಮು ಕಾಶ್ಮೀರದ ಸಂಪುಟ ಸಚಿವ ಸತೀಶ್ ಶರ್ಮಾ ತೀವ್ರವಾಗಿ ಖಂಡಿಸಿದ್ದಾರೆ. “ಫಾರೂಕ್ ಅಬ್ದುಲ್ಲಾ ಅವರು ದೇಶದ ದೊಡ್ಡ ನಾಯಕರು. ಅವರಿಗೆ ಸೂಕ್ತ ಭದ್ರತೆ ಇರಬೇಕು. ಇದೊಂದು ಗಂಭೀರ ಭದ್ರತಾ ಲೋಪವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ದಾಳಿಯ ನಂತರವೂ ಫಾರೂಕ್ ಅಬ್ದುಲ್ಲಾ ಶಾಂತವಾಗಿಯೇ ಅಲ್ಲಿಂದ ನಿರ್ಗಮಿಸಿದರು ಎಂದು ಸಚಿವರು ತಿಳಿಸಿದ್ದಾರೆ.  ಪ್ರಸ್ತುತ ಪೊಲೀಸರು ಆರೋಪಿ ಕಮಲ್ ಸಿಂಗ್‌ನನ್ನು ವಿಚಾರಣೆ ನಡೆಸುತ್ತಿದ್ದು, ಈ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Share This Article