Ad image

ಸೀಮೆಎಣ್ಣೆ ವಿತರಣೆಗೆ ಕೇಂದ್ರ ನಿರ್ಧಾರ; ಆಮದು ನೀತಿಯಲ್ಲೂ ಭಾರೀ ಬದಲಾವಣೆ

Team SanjeMugilu
1 Min Read

ನವದೆಹಲಿ: ದೇಶಾದ್ಯಂತ ಎದುರಾಗಿರುವ ಎಲ್ ಪಿಜಿ  ಸಿಲಿಂಡರ್ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು ಗ್ಯಾಸ್ ಸಿಲಿಂಡರ್‌ಗೆ ಪರ್ಯಾಯವಾಗಿ ಅಡುಗೆ ಮಾಡಲು ರಾಜ್ಯಗಳಿಗೆ ‘ಸೀಮೆಎಣ್ಣೆ’ ಬಿಡುಗಡೆ ಮಾಡಲು ನಿರ್ಧರಿಸಿದೆ.

ಸೀಮೆಎಣ್ಣೆ ಹಾಗೂ ಕಮರ್ಷಿಯಲ್ ಸಿಲಿಂಡರ್ ವಿತರಣೆ
ಗೃಹಬಳಕೆಯ ಸಿಲಿಂಡರ್ ಅಭಾವದ ಹಿನ್ನೆಲೆಯಲ್ಲಿ ಅಡುಗೆಗೆ ಅನುಕೂಲವಾಗುವಂತೆ ಸೀಮೆಎಣ್ಣೆ ಬಳಕೆಗೆ ಕೇಂದ್ರ ಗ್ರೀನ್ ಸಿಗ್ನಲ್ ನೀಡಿದೆ. ಇದರ ಜೊತೆಗೆ ಪರ್ಯಾಯ ವ್ಯವಸ್ಥೆಯಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ಗಳನ್ನು ಕೂಡ ವಿತರಿಸಲು ಕೇಂದ್ರ ನಿರ್ಧರಿಸಿದೆ. ಲಭ್ಯವಿರುವ ಈ ಕಮರ್ಷಿಯಲ್ ಸಿಲಿಂಡರ್ ಗಳನ್ನು ಆದ್ಯತೆಯ ಮೇರೆಗೆ ಮೊದಲು ಯಾರಿಗೆ ನೀಡಬೇಕು ಎಂಬುದನ್ನು ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಹೊರ್ಮುಜ್ ಜಲಸಂಧಿಗೆ ಗುಡ್ ಬೈ
ಭಾರತವು ತನ್ನ ಒಟ್ಟು ಅಗತ್ಯದ ಶೇ. 60 ರಷ್ಟು ಎಲ್ ಪಿಜಿ ಸಿಲಿಂಡರ್ ಅನ್ನು ಆಮದು ಮಾಡಿಕೊಳ್ಳುತ್ತದೆ. ಈ ಆಮದಿನ ಪೈಕಿ ಶೇ. 90 ರಷ್ಟು ಗ್ಯಾಸ್ ಗಲ್ಫ್ ರಾಷ್ಟ್ರಗಳಿಂದ ‘ಹೊರ್ಮುಜ್ ಜಲಸಂಧಿ’ ಮಾರ್ಗದ ಮೂಲಕವೇ ಭಾರತಕ್ಕೆ ಬರುತ್ತಿತ್ತು. ಆದರೆ ಪ್ರಸ್ತುತ ಎದುರಾಗಿರುವ ಜಾಗತಿಕ ಸನ್ನಿವೇಶ ಹಾಗೂ ಕೊರತೆಯ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭಾರತ ಮುಂದಾಗಿದೆ.

ಹೊರ್ಮುಜ್ ಮಾರ್ಗವನ್ನು ಹೊರತುಪಡಿಸಿ ಬೇರೆ ಸುರಕ್ಷಿತ ಮಾರ್ಗಗಳ ಮೂಲಕ ಎಲ್ ಪಿಜಿ ಖರೀದಿಸಲು ಕೇಂದ್ರ ನಿರ್ಧರಿಸಿದೆ. ಪ್ರಮುಖವಾಗಿ ಅಮೆರಿಕಾ, ರಷ್ಯಾ, ಅಲ್ಜೀರಿಯಾ ಸೇರಿದಂತೆ ಹೊರ್ಮುಜ್ ಜಲಸಂಧಿಯ ಮಾರ್ಗವನ್ನು ಬಳಸದ ರಾಷ್ಟ್ರಗಳಿಂದ ಎಲ್ ಪಿಜಿ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.

ಈ ಹಿಂದೆ ಕಚ್ಚಾತೈಲ  ಹಾಗೂ ಎಲ್ ಪಿಜಿ ಖರೀದಿಗೆ ಭಾರತ ಕೇವಲ 27 ದೇಶಗಳನ್ನು ಮಾತ್ರ ಅವಲಂಬಿಸಿತ್ತು. ಆದರೆ ಈಗ ಭವಿಷ್ಯದಲ್ಲಿ ಇಂತಹ ಇಂಧನ ಕೊರತೆ ಎದುರಾಗದಂತೆ ಎಚ್ಚರವಹಿಸಿರುವ ಕೇಂದ್ರ ಸರ್ಕಾರ, ತನ್ನ ಆಮದು ವ್ಯಾಪ್ತಿಯನ್ನು ಹಿಗ್ಗಿಸಿದೆ. ಇದೀಗ ಬರೋಬ್ಬರಿ 40 ದೇಶಗಳಿಂದ ಕಚ್ಚಾತೈಲ ಮತ್ತು ಎಲ್ ಪಿಜಿ ಖರೀದಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.

Share This Article